ಮಂಡ್ಯ : ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಯುವಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಮಂಡ್ಯ ಮೆಡಿಕಲ್ ಕಾಲೇಜ್ ಆವರಣದಲ್ಲಿ ನಡೆದಿದೆ.
ಪ್ಯಾರಾ ಮೆಡಿಕಲ್ ಓದುತ್ತಿದ್ದ ವೈ.ಯರಹಳ್ಳಿ ಗ್ರಾಮದ 20 ವರ್ಷದ ಯುವತಿ ಮೇಲೆ ಹಲ್ಲೆ ಮಾಡಿದ್ದ ಅದೇ ಗ್ರಾಮದ ಸಂಪತ್ ಕುಮಾರ್ ಗೆ ಜನ ಧರ್ಮದೇಟು ನೀಡಿದ್ದಾರೆ. ಇಬ್ಬರೂ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಪ್ರೀತಿ, ಪ್ರೇಮ ಬಿಟ್ಟು ಓದಿನ ಕಡೆ ಗಮನಕೊಡಿ ಎಂದು ಯುವತಿ ತಂದೆ ಇಬ್ಬರಿಗೂ ಬುದ್ದಿ ಹೇಳಿದ್ದರು.
ಬಳಿಕ ಯುವತಿ ಸಂಪತ್ ನಿಂದ ಅಂತರ ಕಾಯ್ದುಕೊಂಡಿದ್ದಳು. ಆದರೆ, ಸಂಪತ್ ಮಾತ್ರ ಪ್ರೀತಿ ಮಾಡುವಂತೆಯೇ ಪೀಡಿಸುತ್ತಿದ್ದನು. ಮೊನ್ನೆ ಸ್ನೇಹಿತರ ಜೊತೆ ಯುವತಿ ಬರ್ತ್ಡೇ ಆಚರಿಸಿಕೊಂಡಿದ್ದ ಸುದ್ದಿ ತಿಳಿದ ಸಂಪತ್ ಮನೆಗೆ ಹೋಗಿ ಗಲಾಟೆ ಮಾಡಿದ್ದಾನೆ. ನಿನ್ನೆ ಸಂಪತ್ ನಂಬರ್ ಪ್ಲೇಟ್ ಇಲ್ಲದ ಸ್ಕೂಟರ್ ನಲ್ಲಿ ಬಂದು ಯುವತಿ ಕಾಲೇಜಿನಿಂದ ಹೊರಗೆ ಬರುತ್ತಿದ್ದಂತೆ ಆಕೆಯ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ. ತಕ್ಷಣವೇ ಸಂಪತ್ ನನ್ನು ಹಿಡಿದ ಜನ ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.










