ರಾಯಚೂರು: ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದರೆಂದು ಮನನೊಂದು ಅಪ್ರಾಪ್ತೆಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ.
ಸಂಗೀತಾ (17) ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತೆ. ಸಂಗೀತಾ, ಕಾರ್ ಡ್ರೈವರ್ ಕೃಷ್ಣ ಎಂಬಾತನ ಪ್ರೇಮ ಪಾಶದಲ್ಲಿ ಬಿದ್ದಿದ್ದಳು. ಈ ಹಿಂದೆ 2 ಬಾರಿ ಕೃಷ್ಣನ ಜೊತೆಗೆ ಈಕೆ ಮನೆಬಿಟ್ಟು ಹೋಗಿದ್ದಳು. ಆಗ ಹೆತ್ತವರು ಬುದ್ದಿವಾದ ಹೇಳಿ ಮನೆಗೆ ಕರೆತಂದಿದ್ದರು. ಆದರೂ ಕೃಷ್ಣನ ಜೊತೆಗೆ ಹೋಗುವುದಾಗಿ ಸಂಗೀತಾ ಹಠ ಮಾಡುತ್ತಿದ್ದಳು. ಆದರೆ ಮನೆಯವರು ಇದಕ್ಕೆ ವಿರೋಧಿಸಿದ್ದಾರೆ. ಇದರಿಂದ ಮನನೊಂದ ಯುವತಿ ಮನೆಯಲ್ಲಿದ್ದ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸದ್ಯ ಬಾಲಕಿ ಸಂಗೀತಾ ಮೃತದೇಹವನ್ನು ಮಾನ್ವಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪ್ರಾಪ್ತೆಯ ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಆರೋಪಿ ಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










