ಪ್ರೇಯಸಿಯ ಜೊತೆ ಸೇರಿ ಪತ್ನಿಯನ್ನೇ ಹತ್ಯೆಗೈದ ಪತಿ…

43
firstsuddi

ದಾವಣಗೆರೆ: ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಜೊತೆ ಸೇರಿ ಪತ್ನಿಯನ್ನೇ ಹತ್ಯೆಗೈದ ಘಟನೆ ತಾಲ್ಲೂಕಿನ ಕೊಡಗನೂರಿನಲ್ಲಿ ನಡೆದಿದೆ.

ಹತ್ಯೆಯಾದ ಮಹಿಳೆಯನ್ನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಸಾಸಲುಹಳ್ಳ ಗ್ರಾಮದ ಕಾವ್ಯಾ ಎಂದು ಗುರುತಿಸಲಾಗಿದೆ. ಕಾವ್ಯಾಳನ್ನು ಕಾಗಳಗೆರೆ ಗ್ರಾಮದ ನಿವಾಸಿ ಸಚಿನ್ ಎಂಬಾತನಿಗೆ ಐದು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಒಂದು ಮಗು ಕೂಡ ಇತ್ತು.

ಆದರೆ, ಬೇರೆ ಮಹಿಳೆಯರ ಚಪಲ ಹೊಂದಿದ್ದ ಸಚಿನ್ ದಾವಣಗೆರೆ ತಾಲ್ಲೂಕಿನ ಕಡ್ಲೆಬಾಳು ಗ್ರಾಮದ ನಿವಾಸಿ ಚೈತ್ರ ಎಂಬಾಕೆಯ ಹಿಂದೆ ಬಿದ್ದಿದ್ದ. ಆಕೆಯನ್ನು ಕೂಡ ಎರಡನೇ ಮದುವೆಯಾಗಿದ್ದ ಎಂದು ಹೇಳಲಾಗುತ್ತಿದೆ. ಇದೇ ವಿಚಾರಕ್ಕೆ ಗಲಾಟೆಯಾಗಿ ಕಾವ್ಯ ತವರು ಸೇರಿದ್ದಳು. ಮತ್ತೆ ಜ.6ರಂದು ಆಕೆಯನ್ನು ಸಚಿನ್ ಮರಳಿ ಕರೆದುಕೊಂಡು ಬಂದಿದ್ದ. ಈ ವೇಳೆ ಮತ್ತೆ ಗಲಾಟೆಯಾಗಿದ್ದು, ಚೈತ್ರಾ ಹಾಗೂ ಸಚಿನ್ ಸೇರಿ ಆಕೆಯ ಕತ್ತು ಹಿಸುಕಿ ಹತ್ಯೆಗೈದಿದ್ದಾರೆ. ಬಳಿಕ ಗೋಣಿಚೀಲದಲ್ಲಿ ತುಂಬಿ ಕೆರೆಗೆ ಎಸೆದು ಹೋಗಿದ್ದಾರೆ.

ಇತ್ತ ಕಾವ್ಯ ಕಾಣದೇ ಇರುವುದರಿಂದ ಅವರ ತವರು ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಸಚಿನ್​ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆಗೈದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಸುಮಾರು 19 ದಿನದ ಬಳಿಕ ಕಾವ್ಯಾಳ ಶವ ಪತ್ತೆಯಾಗಿದ್ದು. ಕೊಳೆತ ಸ್ಥಿತಿಯಲ್ಲಿರುವ ಕಾವ್ಯಾಳ ಮೃತದೇಹವನ್ನು ಮಾಯಕೊಂಡ ಠಾಣೆ ಪೊಲೀಸರು ದಾವಣಗೆರೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದು, ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.

ಇದೀಗ ಪೊಲೀಸರು ಚೈತ್ರಾ ಹಾಗೂ ಸಚಿನ್​ನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.