ದಾವಣೆಗೆರೆ : ಫಾರ್ಮ್ ಹೌಸ್‌ನಲ್ಲಿ ವನ್ಯ ಜೀವಿಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಡಿಸೆಂಬರ್ 21 ರಂದು ಎಸ್.ಎಸ್.ಮಲ್ಲಿಕಾರ್ಜುನ್ ಅವರ ನಗರದ ಕಲ್ಲೇಶ್ವರ ಮಿಲ್ ಹಿಂಭಾಗದ ಫಾರ್ಮ್ ಹೌಸ್ ಮೇಲೆ ಸಿಸಿಬಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಫಾರ್ಮ್ ಹೌಸ್‌ನಲ್ಲಿ ಸಾಕುತ್ತಿದ್ದ ವನ್ಯಜೀವಿಗಳು ಪತ್ತೆಯಾಗಿವೆ.
ಫಾರ್ಮ್ ಹೌಸ್ನಲ್ಲಿ ಏಳು ಚುಕ್ಕೆ ಜಿಂಕೆಗಳು, 10 ಕೃಷ್ಣಮೃಗಗಳು, ಏಳು ಕಾಡುಹಂದಿಗಳು, ಮೂರು ಮುಂಗುಸಿಗಳು, ಎರಡು ನರಿಗಳು ಸಿಕ್ಕಿವೆ. ಅವುಗಳನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಫಾರ್ಮ್ ಹೌಸ್ ನ ಮ್ಯಾನೇಜರ್, ಜಾಗದ ಮಾಲೀಕರು ಸೇರಿದಂತೆ 4 ಜನರ ಮೇಲೆ ಈಗಾಗಲೇ ಅರಣ್ಯ ಇಲಾಖೆ ಕೇಸ್ ದಾಖಲಿಸಿಕೊಂಡಿದೆ. ಆರೋಪಿಗಳೆಲ್ಲರೂ ಈಗ ತಲೆಮರೆಸಿಕೊಂಡಿದ್ದಾರೆ.
ವನ್ಯಜೀವಿ ಪತ್ತೆ ಕೇಸ್ ನಲ್ಲಿ ಮಲ್ಲಿಕಾರ್ಜುನ್ ಅವರ ಹೆಸರಿಲ್ಲ. ಆದರೂ ಕೂಡಾ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಸಚಿವರ ಪರ ಹಿರಿಯ ವಕೀಲ ಪ್ರಕಾಶ್ ಪಾಟೀಲ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿ ಸ್ವೀಕರಿಸಿದ ನ್ಯಾಯಾಲಯ ಜನವರಿ 2ಕ್ಕೆ ವಿಚಾರಣೆ ಮುಂದೂಡಿದೆ.










