ಲುಸೈಲ್ : ನಿನ್ನೆ ಕತಾರ್ ನ ಲುಸೇಲ್ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್ 2022ರ ಅಂತಿಮ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳ ಅಂತರದಲ್ಲಿ ಸೋಲಿಸುವುದರೊಂದಿಗೆ ಅರ್ಜೆಂಟೀನಾ ತಂಡ ಮೂರನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ ಮತ್ತು ಯುವ ತಾರೆ ಕೈಲಿಯನ್ ಎಂಬಪ್ಪೆ ರೋಚಕ ಆಟ ಪ್ರದರ್ಶಿಸಿದರು. ಆದರೆ ಪಂದ್ಯದುದ್ದಕ್ಕೂ ಮಿಂಚಿದ್ದ ಎಂಬಪ್ಪೆ ಶ್ರಮ ಕೊನೆಗೂ ವ್ಯರ್ಥವಾಯಿತು. 120 ನಿಮಿಷಗಳ ಆಟದಲ್ಲಿ ಎರಡು ತಂಡಗಳು ತಲಾ 3 ಗೋಲ್ ಹೊಡೆದ ಕಾರಣ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಗಿತ್ತು. ಪೆನಾಲ್ಟಿಯಲ್ಲಿ 4-2 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಸೋಲಿಸುವ ಮೂಲಕ ಅರ್ಜೆಂಟೀನಾ ವಿಶ್ವಕಪ್ ಗೆ ಮುತ್ತಿಕ್ಕಿತು.
ಪಂದ್ಯ ಸೋತ ಬಳಿಕ ಎಂಬಪ್ಪೆ ಮೈದಾನದಲ್ಲೇ ಕುಳಿತು ಅಳುತ್ತಿದ್ದರು. ಈ ವೇಳೆ ಎಂಬಾಪೆ ಬಳಿ ತೆರಳಿದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸಮಾಧಾನ ಹೇಳಿದ್ದಾರೆ. ಪಂದ್ಯ ಮುಗಿದ ಬಳಿಕ ತಂಡದ ಡ್ರೆಸ್ಸಿಂಗ್ ರೂಮಿಗೆ ತೆರಳಿದ ಮ್ಯಾಕ್ರನ್ ನೋವಿನಲ್ಲಿದ್ದ ಆಟಗಾರರಿಗೆ ಸಮಾಧಾನ ಹೇಳಿ ನಿಮ್ಮ ಆಟದ ಬಗ್ಗೆ ನಮಗೆ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಂಬಾಪೆ 80, 82, 118 ನಿಮಿಷದಲ್ಲಿ ಗೋಲ್ ಹೊಡೆದಿದ್ದರು. ಬಳಿಕ ಪೆನಾಲ್ಟಿ ಶೂಟೌಟ್ ನಲ್ಲಿ ಒಂದು ಗೋಲ್ ಬಾರಿಸಿದ್ದರು. ಈ ಟೂರ್ನಿಯಲ್ಲಿ 8 ಗೋಲು ಹೊಡೆದ ಎಂಬಪ್ಪೆ ಗೋಲ್ಡನ್ ಬೂಟ್ ಪ್ರಶಸ್ತಿ ಜಯಿಸಿದರು.










