ಬಸ್ ನಿಲ್ಲಿಸಲಿಲ್ಲ ಎಂದು ಕಲ್ಲು ಎಸೆದ ಮಹಿಳೆ- 5000 ದಂಡ ಕಟ್ಟಿ ಅದೇ ಬಸ್‍ನಲ್ಲಿ ಪ್ರಯಾಣ…

59
firstsuddi

ಕೊಪ್ಪಳ: ಬಸ್ಸನ್ನು ನಿಲ್ಲಿಸಲಿಲ್ಲ ಎಂದು ಮಹಿಳೆಯೊಬ್ಬಳು ಕಲ್ಲು ಎಸೆದು ಬಸ್ ನಿಲ್ಲಿಸಿದ ಘಟನೆ ಜಿಲ್ಲೆಯ ಹೊಸಲಿಂಗಾಪುರದಲ್ಲಿ ನಡೆದಿದೆ.

ನಿನ್ನೆ ಸಂಜೆ ಕೊಪ್ಪಳದಿಂದ ಹೊಸಪೇಟೆಗೆ ಹೊರಟಿದ್ದ ಬಸ್ ಹೊಸಲಿಂಗಾಪುರ ಬಳಿ ಬರುತ್ತಿದ್ದಂತೆ ಪಾಪನಳ್ಳಿ ನಿವಾಸಿ ಲಕ್ಷ್ಮಿ ಬಸ್ ಗೆ ಕಲ್ಲನ್ನು ಎಸೆದಿದ್ದಾಳೆ. ಬಳಿಕ ಬಸ್ ನಿಲ್ಲಿಸಿದ ಚಾಲಕ ಆಕೆಯನ್ನು ಹತ್ತಿಸಿಕೊಂಡಿದ್ದಾನೆ. ನಂತರ ಪ್ರಯಾಣಿಕರ ಸಮೇತ ಮುನಿರಾಬಾದ್ ಪೊಲೀಸ್ ಠಾಣೆಗೆ ಬಸ್ಸನ್ನು ತಂದಿದ್ದಾನೆ. ಅಲ್ಲದೇ ಠಾಣೆಯಲ್ಲಿ ಚಾಲಕ ದೂರು ನೀಡಲು ಮುಂದಾಗಿದ್ದಾನೆ.

ಈ ವೇಳೆ ಮಹಿಳೆ ತಾನು ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದು, ಬಸ್‍ಗಾಗಿ ಕಾದರೂ ಯಾವೊಂದು ಬಸ್ ನಿಲ್ಲಿಸಲಿಲ್ಲ. ತನ್ನ ಜೊತೆ ಇನ್ನೋರ್ವ ಮಹಿಳೆ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದರು. ಇದರಿಂದ ಕೋಪಗೊಂಡು ಬಸ್ ಗೆ ಕಲ್ಲೆಸೆದಿರುವುದಾಗಿ ತಿಳಿಸಿದ್ದಾಳೆ.

ಕಲ್ಲು ಎಸೆತದಿಂದ ಬಸ್ ಗ್ಲಾಸ್ ಡ್ಯಾಮೇಜ್ ಆಗಿದ್ದು, ಬಸ್ ಡಿಪೋ ಮ್ಯಾನೇಜರ್ 5,000 ರೂ. ದಂಡ ಪಾವತಿಸುವಂತೆ ಸೂಚಿಸಿದ್ದಾರೆ. ಇಲ್ಲದಿದ್ದರೆ ಎಫ್ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬಳಿಕ ಮಹಿಳೆ ಮಾಡಿದ ತಪ್ಪಿಗೆ ಕ್ಷಮೆ ಕೇಳಿದ್ದು, ಪೊಲೀಸರಿಗೆ ಮನವಿ ಮಾಡಿ ಕೊನೆಗೆ 5000 ದಂಡ ಕಟ್ಟಿ ಅದೇ ಬಸ್‍ನಲ್ಲಿ ತೆರಳಿದ್ದಾಳೆ.