ಬೆಂಗಳೂರು : ಜ್ಯೂ.ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಆರ್ಆರ್ಆರ್ ಸಿನಿಮಾ ಇಂದು ವಿಶ್ವದಾದ್ಯಂತ ತೆರೆಕಂಡಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಆರ್ಆರ್ಆರ್’ ಸಿನಿಮಾವನ್ನ ಬಾಹುಬಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡಿದ್ದಾರೆ. ಟಾಲಿವುಡ್ ಚಿತ್ರರಂಗದ ಸೂಪರ್ ಸ್ಟಾರ್ ಗಳಾದ ಜೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ತೇಜ್ ನಾಯಕರಾಗಿ ಮಿಂಚಿದ್ದು, ನಟಿ ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರ್ಆರ್ಆರ್ ಸಿನಿಮಾ ರಾಜ್ಯಾದ್ಯಂತ 450 ಥಿಯೇಟರ್ ಗಳಲ್ಲಿ ರಿಲೀಸ್ ಆಗಿದ್ದು, ಸಿನಿಮಾ ನೋಡಲು ಅಭಿಮಾನಿಗಳು ಥಿಯೇಟರ್ ನತ್ತ ಮುಗಿಬೀಳುತ್ತಿದ್ದಾರೆ. ಅಲ್ಲದೇ ರಾಮ್ ಚರಣ್ ಹಾಗೂ ಜೂ.ಎನ್ಟಿಆರ್ ಕಟೌಟ್ ಗಳಿಗೆ ಹಾರ ಹಾಕಿ, ಕ್ಷೀರಾಭಿಷೇಕ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದಲೇ ಶೋ ಆರಂಭವಾಗಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಅಂಜನ್ ಚಿತ್ರ ಮಂದಿರದಲ್ಲಿ ತಡರಾತ್ರಿ 12:30ಕ್ಕೆ ಆರ್ಆರ್ಆರ್ ಮೊದಲ ಶೋ ಬಿಡುಗಡೆಯಾಗಿದೆ. ಅಂಜನ್ ಥಿಯೇಟರ್ ಆವರಣದಲ್ಲಿ ರಾಮ್ ಚರಣ್ ಹಾಗೂ ಜೂ.ಎನ್ಟಿಆರ್ ಅಭಿಮಾನಿಗಳ ಪರಸ್ಪರ ಜೈಕಾರ ಕೂಗಿ ಸಂಭ್ರಮಿಸಿದ್ದಾರೆ. ಅಲ್ಲದೇ ದೊಡ್ಡಬಳ್ಳಾಪುರ ನಗರದ ಸೌಂದರ್ಯ ಮಹಲ್ ನಲ್ಲಿ ಇಂದು ಮುಂಜಾನೆ 3 ಗಂಟೆಗೆ ಚಿತ್ರ ಪ್ರದರ್ಶನಗೊಂಡಿತು. ಅಭಿಮಾನಿಗಳಿಗಾಗಿ ಮುಂಜಾನೆಯೇ ಸಿನಿಮಾ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಥಿಯೇಟರ್ ತುಂಬಾ ಜಮಾಯಿಸಿದ ಅಭಿಮಾನಿಗಳು ಪರದೆ ಮುಂದೆ ಕುಣಿದು ಕುಪ್ಪಳಿಸಿದರು.










