ಬಿಎಂಟಿಸಿ ಬಸ್ ಹರಿದು ಮೂರು ವರ್ಷದ ಮಗು ಸಾವು…

54
firstsuddi

ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಮೂರು ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟನೆ ನಿನ್ನೆ ನಗರದ ಗಾರೇಪಾಳ್ಯ ಜಂಕ್ಷನ್ ಬಳಿ ನಡೆದಿದೆ.

ಅಯಾನ್ ಪಾಷಾ (3) ಮೃತಪಟ್ಟ ಮಗು. ಅಯಾನ್, ಮಂಡ್ಯ ಜಿಲ್ಲೆ ಮದ್ದೂರಿನ ಆಯಿಷಾ ಮತ್ತು ನಯೀಂ ಪಾಷಾ ದಂಪತಿಯ ಮಗು. ಆಯಿಷಾ, ಮಗುವನ್ನು ನಗರದ ಸಿಂಗಸಂದ್ರದಲ್ಲಿರುವ ತಮ್ಮ ಅಕ್ಕ ಗವರ್ ಉನ್ನಿಸಾ ಅವರ ಮನೆಯಲ್ಲಿ ಬಿಟ್ಟಿದ್ದರು.

ಉನ್ನಿಸಾ ಅವರು ಮಗುವನ್ನು ಬೈಕ್​ನಲ್ಲಿ ಹಿಂದೆ ಕೂರಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಉನ್ನಿಸಾ ಅವರು ಟ್ರಾಫಿಕ್ ಸಿಗ್ನಲ್‍ನಲ್ಲಿ ಬೈಕ್‍ಅನ್ನು ಮುಂದಕ್ಕೆ ಚಾಲನೆ ಮಾಡುತ್ತಿದ್ದಂತೆ ಮಗು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ಅದೇ ವೇಳೆಗೆ ಹಿಂದಿನಿಂದ ಬಂದ ಬಿಎಂಟಿಸಿ ಬಸ್, ಮಗು ಮೇಲೆ ಹರಿದಿದೆ. ಪರಿಣಾಮ ಅಯಾನ್ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.

ಘಟನೆ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.