ಬಿಎಸ್‍ವೈ ವಿರುದ್ಧದ ತನಿಖೆಗೆ ತಡೆ ನೀಡಿದ ಸುಪ್ರೀಂಕೋರ್ಟ್.

87
firstsuddi

ನವದೆಹಲಿ : ಭ್ರಷ್ಟಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧದ ತನಿಖೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.

ತನಿಖೆಗೆ ಅನುಮತಿ ನೀಡಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಯಡಿಯೂರಪ್ಪ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಹೈಕೋರ್ಟ್ ತೀರ್ಪಿಗೆ ತಡೆ ನೀಡಿ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.

ವಿಚಾರಣೆ ವೇಳೆ ಬಿ.ಎಸ್ ಯಡಿಯೂರಪ್ಪ ಪರ ವಾದ ಮಂಡಿಸಿದ ಹಿರಿಯ ಮುಕುಲ್ ರೊಹಟಗಿ, ಜನಪ್ರತಿನಿಧಿಗಳ ವಿಷಯದಲ್ಲಿ ತನಿಖೆಗೆ ರಾಜ್ಯಪಾಲರ ಪೂರ್ವಾನುಮತಿ ಕಡ್ಡಾಯ, ಹೀಗಿದ್ದರೂ ಹೈಕೋರ್ಟ್ ತನಿಖೆಗೆ ಸೂಚಿಸಿದೆ ಎಂದು ವಾದಿಸಿದರು.

ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಗುತ್ತಿಗೆ ನೀಡುವಾಗ ಭ್ರಷ್ಟಾಚಾರ ಆಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಆದರೆ, ರಾಜ್ಯಪಾಲರು ಪೂರ್ವಾನುಮತಿ ನೀಡದ ಕಾರಣ ದೂರು ವಜಾಗೊಳಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿತ್ತು.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಟಿ.ಜೆ. ಅಬ್ರಹಾಂ ಹೈಕೋರ್ಟ್ ಮೆಟ್ಟಿಲೇರಿದ್ದರು.ದೂರನ್ನು ಮರುಪರಿಶೀಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚಿಸಿತ್ತು. ಬಳಿಕ ತನಿಖೆ ನಡೆಸಿ ವರದಿ ನೀಡಲು ಲೋಕಾಯುಕ್ತಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚಿಸಿತ್ತು.