ಮರಳು ಸಾಗಣೆಗೆ ಲಂಚಕ್ಕೆ ಬೇಡಿಕೆ – ಲೋಕಾಯುಕ್ತರ ಬಲೆಗೆ ಬಿದ್ದ ಪೊಲೀಸರು.

61
firstsuddi

ಕಲಬುರಗಿ : ಮರಳು ಸಾಗಣೆಗೆ ಲಂಚದ ಬೇಡಿಕೆ ಇಟ್ಟ ಜೇವರ್ಗಿ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ಇಬ್ಬರು ಕಾನ್ಸ್ ಟೇಬಲ್ ಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇನ್ಸ್ ಪೆಕ್ಟರ್ ಶಿವಪ್ರಸಾದ ಮಠದ, ಜೇವರ್ಗಿ ಎಸ್ ಪಿ ಬೀಟ್ ಕಾನ್ಸ್ಟೇಬಲ್ ಶಿವರಾಯ ಅರಳಗುಂಡಗಿ ಹಾಗೂ ಪಿಐ ವಾಹನ ಚಾಲಕ ಅವಣ್ಣ ಲೋಕಾಯುಕ್ತರ ಬಲೆಗೆ ಬಿದ್ದವರು. ಶಹಾಪುರದ ಮರಳು ವ್ಯಾಪಾರಿ ಅಖಿಲ್ ಎಂಬುವರ ದೂರಿನ ಮೇರೆಗೆ ದಾಳಿ ನಡೆಸಲಾಗಿದೆ.

ಮರಳು ವ್ಯಾಪಾರಿ ಅಖಿಲ್ ಅವರ ಬಳಿ 10 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದ ಶಿವರಾಯ ಅರಳಗುಂಡಗಿ, ಜೇವರ್ಗಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಹಣ ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿದ್ದರು. ಈ ವೇಳೆ ಶಿವರಾಯ ಹಣದ ಸಮೇತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಲೋಕಾಯುಕ್ತ ಪೊಲೀಸರು ಬೆನ್ನಟ್ಟಿ ಆತನನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್ ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ನೆಲಕ್ಕೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಶಿವರಾಯನನ್ನು ವಶಕ್ಕೆ ಪಡೆದ ಲೋಕಾಯುಕ್ತರು ವಿಚಾರಣೆ ನಡೆಸಿದಾಗ ಇನ್ಸ್ ಪೆಕ್ಟರ್, ಹಾಗೂ ಅವರ ವಾಹನ ಚಾಲಕನ ಪಾಲು ಇರುವುದನ್ನು ಹೇಳಿದ್ದಾನೆ. ಆಗ ಶಿವರಾಯನಿಂದಲೇ ಇನ್ಸ್ ಪೆಕ್ಟರ್ ಗೆ ಕರೆ ಮಾಡಿಸಿ ಲಂಚದ ಹಣ ಪಡೆಯಲು ಬರುವಂತೆ ತಿಳಿಸಿದ್ದಾರೆ. ಇನ್ಸ್ ಪೆಕ್ಟರ್ ಶಿವಪ್ರಸಾದ ಹಾಗೂ ಚಾಲಕ ಅವ್ವಣ್ಣ ಕಲಬುರಗಿಯಿಂದ ಜೇವರ್ಗಿ ಕಡೆಗೆ ಬರುವಾಗ ನಂದಿಕೂರ ಬಳಿ ಲೋಕಾಯುಕ್ತ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.