ಬಿಜೆಪಿ ನನ್ನ ಗುರು : ರಾಹುಲ್ ಗಾಂಧಿ.

48
firstsuddi

ನವದೆಹಲಿ: ನಾನು ಏನು ಮಾಡಬಾರದು ಎಂದು ಬಿಜೆಪಿ ನಿರಂತರವಾಗಿ ನನಗೆ ನೆನಪಿಸುತ್ತಲೇ ಇದೆ. ಇದರಿಂದ ನಾನು ಬಿಜೆಪಿಯನ್ನು ನನ್ನ ಗುರುವೆಂದು ಪರಿಗಣಿಸುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ದೆಹಲಿಯಲ್ಲಿಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರ್ ಎಸ್ ಎಸ್ ನಮ್ಮ ಮೇಲೆ ಆಕ್ರಮಣಕಾರಿ ದಾಳಿ ಮಾಡಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ಅವರ ದಾಳಿಯಿಂದ ಕಾಂಗ್ರೆಸ್ ಪಕ್ಷ ತನ್ನ ಸಿದ್ಧಾಂತ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಾನು ಅವರನ್ನು ನನ್ನ ಗುರು ಎಂದು ಪರಿಗಣಿಸುತ್ತೇನೆ ಎಂದು ಕುಟಕುಕಿದರು.

ಬಿಜೆಪಿಯ ಬಳಿ ಸಾಕಷ್ಟು ಹಣವಿದೆ. ಅವರು ಏನೇ ಮಾಡಿದ್ರೂ ಸತ್ಯದ ಜೊತೆಗೆ ಹೋರಾಟ ಮಾಡಿ ಗೆಲ್ಲೋದಕ್ಕೆ ಆಗೋದಿಲ್ಲ ಎಂದು ತಿರುಗೇಟು ನೀಡಿದರು.

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ 113 ಬಾರಿ ಭದ್ರತಾ ನಿಯಮ ಉಲ್ಲಂಘನೆ ಮಾಡಿರುವುದಾಗಿ ಕೇಂದ್ರದ ಅರೆಸೇನಾ ಪಡೆ ಸಿಆರ್ ಪಿಎಫ್ ಹೇಳಿದೆ. ಇದಕ್ಕೆ ರಾಹುಲ್ ತಿರುಗೇಟು ನೀಡಿ, ಬುಲೆಟ್ ಪ್ರೂಫ್ ಕಾರಿನಲ್ಲಿ ನಾನು ಭಾರತ್ ಜೋಡೋ ಯಾತ್ರೆಯನ್ನು ಮಾಡಬೇಕೆಂದು ಸರ್ಕಾರ ಬಯಸುತ್ತದೆ. ಭಾರತ್ ಜೋಡೋ ಯಾತ್ರೆ ಪಾದಯಾತ್ರೆಯಾಗಿದ್ದು, ಅದನ್ನು ಬುಲೆಟ್ ಪ್ರೂಫ್ ವಾಹನದಲ್ಲಿ ಮಾಡಲು ಹೇಗೆ ಸಾಧ್ಯ ಎಂದು ಕೇಳಿದ್ದಾರೆ.

ಭಾರತ್ ಜೋಡೋ ಯಾತ್ರೆಯು ದ್ವೇಷದ ವಿರುದ್ಧ ರಾಷ್ಟ್ರವನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿದೆ ಎಂದು ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ. ಇದು ನಮಗೆ ಯಶಸ್ವಿ ಯಾತ್ರೆಯಾಗಿದೆ. ಈ ಯಾತ್ರೆಯಿಂದ ನಾನು ಬಹಳಷ್ಟು ಕಲಿತಿದ್ದೇನೆ. ನಿರುದ್ಯೋಗ ಸಮಸ್ಯೆಗಳು ಮತ್ತು ಬೆಲೆ ಏರಿಕೆಯ ಸಮಸ್ಯೆಗಳು ಜನರನ್ನು ಕಿತ್ತು ತಿನ್ನುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.