ಬೆಂಗಳೂರು : ಸರಣಿ ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ವಿರುದ್ದ ಕಿಡಿ ಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು, ಜಿಂದಾಲ್ ಗೆ ಭೂಮಿ ನೀಡುವ ವಿಚಾರದಲ್ಲಿ ಅಂದು ನನ್ನ ಸರ್ಕಾರದ ವಿರುದ್ಧ ಹಾಗೂ ನನ್ನ ವಿರುದ್ಧ ಸಲ್ಲದ ಆರೋಪ ಮಾಡಿದ್ದ ಬಿಎಸ್ ವೈ ಇಂದು ಅದೇ ಆರೋಪಗಳನ್ನು ತಮ್ಮ ಮೇಲೆ ಹೊತ್ತುಕೊಳ್ಳುವರೇ?. ವಿರೋಧಕ್ಕಾಗಿಯೇ ವಿರೋಧ ಮಾಡುವುದು, ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸಿದ್ದನ್ನೇ ಆಡಳಿತಕ್ಕೆ ಬಂದಾಗ ಕದ್ದು ಮುಚ್ಚಿ ಮಾಡುವುದು ಬಿಜೆಪಿಯ ‘ಸಂಸ್ಕೃತಿ’. ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಬಿಎಸ್ ವೈ ಅಹೋರಾತ್ರಿ ಧರಣಿ, ಬಿಜೆಪಿ ಯುವ ಮೋರ್ಚಾದಿಂದ ವಿಧಾನಸೌಧ ಮುತ್ತಿಗೆ, ಮೈತ್ರಿ ಸರ್ಕಾರದ ಮೇಲೆ ಕಿಕ್ ಬ್ಯಾಕ್ ಆರೋಪ…’ ಜಿಂದಾಲ್ಗೆ 3,677 ಎಕರೆ ಭೂಮಿ ಮಾರಾಟ ಮಾಡಲು ನಿರ್ಧರಿಸಿದ್ದ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ನಡೆಸಿದ್ದ ಹೋರಾಟಗಳಿವು. ಆದರೆ ಇಂದು ಬಿಜೆಪಿ ಅದೇ ಜಿಂದಾಲ್ ಗೆ ಅದೇ ಭೂಮಿಯನ್ನು ಸದ್ದಿಲ್ಲದೇ ಮಾರಿದೆ ಎಂದು ಆರೋಪಿಸಿದ್ದಾರೆ.
ಆಗ ಕಾಂಗ್ರೆಸ್ ಶಾಸಕರಾಗಿದ್ದ, ಈಗ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಆನಂದ್ ಸಿಂಗ್ ಜಿಂದಾಲ್ಅನ್ನು’ ಈಸ್ಟ್ ಇಂಡಿಯಾ ಕಂಪನಿ’ ಎಂದಿದ್ದರು. ಜಿಂದಾಲ್ ವಿರುದ್ಧ ಅಂದಿನ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಅವರೇ ಇರುವ ಈಗಿನ ಸಂಪುಟ ಸಭೆ ಜಿಂದಾಲ್ಗೆ ಭೂಮಿ ನೀಡಿದೆ. ಆನಂದ್ ಸಿಂಗ್ ಈಗ ಈಸ್ಟ್ ಇಂಡಿಯಾ ಕಂಪನಿ ಪರವಾಗಿದ್ದಾರಾ? .ಜಿಂದಾಲ್ ಗೆ ಭೂಮಿ ನೀಡುವ ವಿಚಾರವಾಗಿ ಅಂದು ಮೈತ್ರಿ ಸರ್ಕಾರದ ಭಾಗವಾಗಿದ್ದುಕೊಂಡೇ ಟೀಕೆ ಮಾಡಿದ್ದ, ದಾಖಲೆ ಪತ್ರಗಳನ್ನು ಬಿಡುಗಡೆ ಮಾಡಿದ್ದ ಹೆಚ್.ಕೆ.ಪಾಟೀಲ್ ಅವರು ಈಗ ಏನು ಮಾಡುತ್ತಿದ್ದಾರೆ. ಅವರ ದಾಖಲೆ ಪತ್ರಗಳೆಲ್ಲವೂ ಎಲ್ಲಿ ಅಡಗಿಕೊಂಡಿವೆ? ಈಗ ಅವುಗಳನ್ನು ಮತ್ತೊಮ್ಮೆ ಬಿಡುಗಡೆ ಮಾಡಲು ಯಾರು ಅಡ್ಡ ಇದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿ ಮಾರಾಟ ಮಾಡಲು ಬಿಜೆಪಿ ಸರ್ಕಾರದ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆದರೆ ಎಕರೆವಾರು ಶುದ್ಧ ಕ್ರಯಕ್ಕೆ ನಿಗದಿ ಮಾಡಿದ ಮೊತ್ತವೆಷ್ಟು ಎಂಬ ಪ್ರಶ್ನೆಗೆ ಗೃಹ ಸಚಿವರೇ ‘ಗೊತ್ತಿಲ್ಲ’ ಎಂಬ ಉತ್ತರ ನೀಡಿದ್ದಾರೆ. ಸ್ವತಃ ಗೃಹ ಸಚಿವರಿಗೇ ಮಾಹಿತಿ ಇಲ್ಲ ಎಂದರೆ ಏನು ಅರ್ಥ? ಇದನ್ನು ನಂಬಲು ಸಾಧ್ಯವೇ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಜಿಂದಾಲ್ ಮುಂದೆ ಬಿಜೆಪಿ ಸರ್ಕಾರ ಏಕಾಏಕಿ ಮಂಡಿಯೂರಲೂ ಒಂದು ಕಾರಣವಿದೆ. ಅದೇನೆಂದು ಯಡಿಯೂರಪ್ಪರಿಗೆ ಚೆನ್ನಾಗಿ ಗೊತ್ತಿದೆ. ಅದನ್ನು ಬಿಎಸ್ ವೈ ಅವರೇ ಬಹಿರಂಗಪಡಿಸಲಿ. ಲೀಸ್ ಕಂ ಸೇಲ್ ಆಧಾರದ ಭೂಮಿಯನ್ನು ಅಂತಿಮವಾಗಿ ಕ್ರಯ ಮಾಡಿಕೊಡಲೇಬೇಕಾದ ಕಾನೂನು ಬಿಜೆಪಿಗೆ ಈಗಲಾದರೂ ಅರಿವಿಗೆ ಬಂದಿದ್ದರೆ ಸಾಕು. ಇನ್ನಾದರೂ ಬಿಜೆಪಿ ಸಲ್ಲದ ಕಿತಾಪತಿ ಮಾಡದಿರಲಿ ಎಂದಿದ್ದಾರೆ.










