ಬಿಜೆಪಿಯವರು ಬಾಯಲ್ಲಿ ಜೈಶ್ರೀರಾಮ್ ಎಂದು ಹೇಳಿ ಮಾಡಬಾರದ ಕೆಲಸ ಮಾಡುತ್ತಾರೆ: ದಿನೇಶ್ ಗುಂಡೂರಾವ್.

46
firstsuddi

ಮಂಗಳೂರು: ‘ಬಿಜೆಪಿಯವರು ಹೇಳುವುದೇ ಬೇರೆ, ಮಾಡುವುದೇ ಬೇರೆ. ಚುನಾವಣಾ ಬಾಂಡ್ ಮೂಲಕ ಕಾನೂನುಬದ್ಧವಾಗಿ ಲೂಟಿ ಮಾಡಿದ, ಧರ್ಮವನ್ನು ಬಳಸಿ ಅಧರ್ಮ ನಡೆಸಿದ ಪಕ್ಷ ಬಿಜೆಪಿ. ಬಾಯಲ್ಲಿ ಜೈಶ್ರೀರಾಮ್ ಎಂದು ಹೇಳಿ ಅವರು ಮಾಡಬಾರದ ಕೆಲಸ ಮಾಡುತ್ತಾರೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ ) ಮುಖ್ಯ ಉದ್ದೇಶವಿದ್ದುದು ದೇಶದ ಆರ್ಥಿಕತೆ ದುರ್ಬಲಗೊಳಿಸುವ ಡ್ರಗ್ಸ್ ಜಾಲವನ್ನು ಮಟ್ಟಹಾಕುವುದು. ಈ ಕಠಿಣ ಕಾನೂನಿನ ಪ್ರಕಾರ ವ್ಯಕ್ತಿಯು ನಿರಪರಾಧಿ ಎಂದು ಸಾಬೀತುಪಡಿಸುವವರೆಗೆ ಆತನನ್ನು ತಪ್ಪಿತಸ್ಥ ಎಂದೇ ಪರಿಗಣಿಸಲಾಗುತ್ತದೆ. ಆರೋಪಿ ನಿರಪರಾಧಿ ಎಂಬುದು ನ್ಯಾಯಾಧೀಶರಿಗೆ ಮನವರಿಕೆ ಆಗುವರೆಗೆ ಜಾಮೀನು ಸಿಗದು. ಈಗ ಪಿಎಂಎಲ್ಎ ಅಡಿ ಯಾರ ಮೇಲೂ ಪ್ರಕರಣ ದಾಖಲಿಸಬಹುದು ಎಂಬ ಸ್ಥಿತಿ ನಿರ್ಮಾಣವಾಗಿದೆ. ಈ ಕಠಿಣ ಕಾನೂನನ್ನು ರಾಜಕಾರಣಿಗಳು, ಉದ್ದಿಮೆದಾರರ ಮೇಲೆ ರಾಜಕೀಯವಾಗಿ ದುರ್ಬಳಕೆ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ಶೂನ್ಯ ಲಾಭ ಹೊಂದಿದ ಅಥವಾ ನಷ್ಟದಲ್ಲಿರುವ 33 ಕಂಪನಿಗಳು ಚುನಾವಣಾ ಬಾಂಡ್ ರೂಪದಲ್ಲಿ ಬಿಜೆಪಿಗೆ ರೂ434.2 ಕೋಟಿ ದೇಣಿಗೆ ನೀಡಿವೆ. ಇವೆಲ್ಲವೂ ವಂಚಕ ಷೆಲ್ ಕಂಪನಿಗಳು ಎಂಬುದು ಸ್ಪಷ್ಟ. ಕೆಲವು ಕಂಪನಿಗಳು ಸ್ವಲ್ಪ ತಮ್ಮ ಲಾಭದ ಮೊತ್ತಕ್ಕಿಂತಲೂ ಹೆಚ್ಚು ಹಣವನ್ನು ಚುನಾವಣಾ ಬಾಂಡ್ ರೂಪದಲ್ಲಿ ಬಿಜೆಪಿಗೆ ದೇಣಿಗೆ ನೀಡಿದ್ದು, ಈ ಮೊತ್ತ ರೂ601 ಕೋಟಿಯಷ್ಟಿದೆ. ಲಾಭವನ್ನೇ ಗಳಿಸದೇ ರಾಜಕೀಯ ಪಕ್ಷಕ್ಕೆ ದೇಣಿಗೆ ನಿಡುವುದಾದರೂ ಹೇಗೆ. ಇದು ಹಣ ಅಕ್ರಮವ ವರ್ಗಾವಣೆ ಯಲ್ಲವೇ. ಜಾರಿ ನಿರ್ದೇಶನಾಲಯವು ಬಿಜೆಪಿ ವಿರುದ್ಧವೂ ಪಿಎಂಎಲ್ಎ ಅಡಿ ಕ್ರಮ ಕೈಗೊಳ್ಳಬೇಕಲ್ಲವೇ’ ಎಂದು ಅವರು ಪ್ರಶ್ನಿಸಿದರು.

ಬಿಜೆಪಿಯು ಕಾನೂನಿನ ಹಾಗೂ ಧರ್ಮದ ಕವಚವನ್ನು ಬಳಸಿ ಅತ್ಯಂತ ಭ್ರಷ್ಟ ಹಾಗೂ ಪಾಪದ ಕೆಲಸ ಮಾಡಿದೆ. ಈ ಪ್ರಕಾರದ ಕಪಟ ಹಾಗೂ ಮೋಸವನ್ನು ದೇಶದ ಬೇರಾವುದೇ ಪಕ್ಷ ಮಾಡಿದೆಯೇ’ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರವು ತೆರಿಗೆ ಪಾಲು ಹಂಚಿಕೆಯಲ್ಲಿ, ಹಾಗೂ ಬರ ಪರಿಹಾರ ವಿತರಣೆಯಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪ ಮಾಡಿದರು.