ಬಿಪೋರ್​ಜಾಯ್ ಚಂಡಮಾರುತದ ಅಬ್ಬರಕ್ಕೆ ಇಬ್ಬರು ಬಲಿ…

41
firstsuddi

ಗುಜರಾತ್: ಬಿಪೋರ್​ಜಾಯ್ ಚಂಡಮಾರುತದ ಅಬ್ಬರಕ್ಕೆ ರಾಜ್ಯದ ಭಾವನಗರದಲ್ಲಿ ಭಾರಿ ಮಳೆಗೆ ಸಿಲುಕಿ ತಂದೆ-ಮಗ ಇಬ್ಬರು ಮೃತಪಟ್ಟಿದ್ದಾರೆ.

ಭಾವನಗರ ಜಿಲ್ಲೆಯಲ್ಲಿ ನಿನ್ನೆ ಭಾರಿ ಮಳೆ ಸುರಿದಿದೆ. ಜಿಲ್ಲೆಯ ಸಿಹೋರ್ ತಾಲೂಕಿನ ಭಂಡಾರ್ ಮತ್ತು ವಡೋದರ ಗ್ರಾಮದ ನಡುವಿನ ದಶರಥಭಾಯಿ ಅವರ ಜಮೀನಿನ ಬಳಿ ಹಾದುಹೋಗುವ ಕಾಲುವೆ ತುಂಬಿ ಹರಿಯುತ್ತಿತ್ತು. ಮಳೆಯಿಂದ ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಆಡು ಮತ್ತು ಕುರಿಗಳು ಸಿಲುಕಿಕೊಂಡಿದ್ದವು. ಇದನ್ನು ಗಮನಿಸಿ ರಕ್ಷಿಸಲು ಹೋಗಿದ್ದ ಸೋದವಾಡರ ಗ್ರಾಮದ ನಿವಾಸಿಗಳಾದ ರಾಮ್‍ಜಿಭಾಯಿ ಮೇಘಾಭಾಯಿ ಪರ್ಮಾರ್(55) ಮತ್ತು ಅವರ ಮಗ ರಾಕೇಶಭಾಯಿ ರಂಭಾಯ್ ಪರ್ಮಾರ್(22) ಕಾಲುವೆಗೆ ಹಾರಿದ್ದಾರೆ.

ಕಾಲುವೆಗೆ ಹಾರಿದ ಇಬ್ಬರು ಆಯಾಸದಿಂದ ಮೃತಪಟ್ಟಿರಬಹುದೆಂದು ಅನುಮಾನಿಸಲಾಗಿದೆ. ಬಳಿಕ ಈ ವಿಷಯ ಗ್ರಾಮಸ್ಥರಿಗೆ ತಿಳಿದಿದೆ. ಕೂಡಲೇ ಗ್ರಾಮಸ್ಥರು ಕಾಲುವೆ ಬಳಿ ತೆರಳಿ ಕಾಲುವೆಯಿಂದ ತಂದೆ ಮಗನ ಶವವನ್ನು ಹೊರತೆಗೆದಿದ್ದಾರೆ. ಅಲ್ಲದೇ ಅವರ ಜೊತೆಗೆ 22 ಮೇಕೆಗಳು ಸಾವನ್ನಪ್ಪಿದ್ದು, ಅವುಗಳನ್ನು ಸಹ ಕಾಲುವೆಯಿಂದ ಹೊರತೆಗೆದಿದ್ದಾರೆ.

ನಿನ್ನೆ ಸಂಜೆ ಗುಜರಾತಿನ ಜಖೌ ಬಂದರಿನ ಬಳಿ ಬಿಪೊರ್‌ಜೋಯ್ ಚಂಡಮಾರುತ ತೀವ್ರ ಪ್ರಮಾಣದಲ್ಲಿ ಬೀಸಿ ಭೂಕುಸಿತವನ್ನು ಉಂಟುಮಾಡಿತು, ಗಂಟೆಗೆ 115-125 ಕಿಲೋಮೀಟರ್ ವೇಗದಲ್ಲಿ 140 ಕಿಲೋ ಮೀಟರ್ ಪ್ರದೇಶದವರೆಗೆ ಗಾಳಿ ಬೀಸಿದ್ದು ಭಾರಿ ಮಳೆಯಾಗಿದೆ.

ಉಳಿದಂತೆ ರಾಜ್ಯದಲ್ಲಿ ಚಂಡಮಾರುತದಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚು ಹಾನಿಗೊಳಗಾದ ಪ್ರದೇಶವಾದ ಕಚ್ ಜಿಲ್ಲೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ಅಮಿತ್ ಅರೋರಾ ಹೇಳಿದ್ದಾರೆ.

ಚಂಡಮಾರುತಕ್ಕೆ ಸಂಬಂಧಿಸಿದ ಯಾವುದೇ ಘಟನೆಯಿಂದಾಗಿ ಕಚ್‌ನಲ್ಲಿ ಇದುವರೆಗೆ ಯಾರೂ ಮೃತಪಟ್ಟಿಲ್ಲ. ಗಂಟೆಗೆ ಸುಮಾರು 80 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿರುವ ಗಾಳಿಯಿಂದಾಗಿ ಕೆಲವು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಸಮವಾಗಿವೆ. ವಿದ್ಯುತ್ ಕಡಿತದಿಂದ ರಾಜ್ಯದ ಹಲವಾರು ಪ್ರದೇಶಗಳು ಕತ್ತಲೆಯಲ್ಲಿ ಮುಳುಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.