ಬೀದರ್ : ಫೀರ್ ಪಾಶಾ ದರ್ಗಾ ಮೂಲ ಅನುಭವ ಮಂಟಪ ಎಂಬ ವಿವಾದ ಹಿನ್ನೆಲೆ ಬೀದರ್ ಜಿಲ್ಲಾದ್ಯಂತ ಪ್ರಮೋದ್ ಮುತಾಲಿಕ್ ಹಾಗೂ ಆಂದೋಲ ಸಿದ್ದಲಿಂಗ ಸ್ವಾಮಿ ಅವರಿಗೆ ಪ್ರವೇಶ ನಿರ್ಬಂಧ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಜೂನ್ 4 ಬೆಳಗ್ಗೆ 6 ಗಂಟೆಯಿಂದ ಜೂನ್ 12 ರ ಸಂಜೆ 6 ಗಂಟೆವರಗೆ ಬೀದರ್ ಜಿಲ್ಲಾದ್ಯಂತ ಪ್ರವೇಶಕ್ಕೆ ನಿರ್ಬಂಧ ಮಾಡಿ ಬೀದರ್ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಆದೇಶ ಹೊರಡಿಸಿದ್ದಾರೆ. ಇಂದು ಬಸವಕಲ್ಯಾಣ ಪಟ್ಟಣದ ಘನ ರುದ್ರಮುನಿ ಶಿವಾಚಾರ್ಯ ಮಠಕ್ಕೆ ಭೇಟಿ ನೀಡಲು ಪ್ರಮೋದ್ ಮುತಾಲಿಕ್ ಹಾಗೂ ಅಂದೋಲಾ ಸಿದ್ದಲಿಂಗ ಸ್ವಾಮಿ ನಿರ್ಧರಿಸಿದ್ದರು.
ಜೂನ್ 12 ರಂದು ಮೂಲ ಅನುಭವ ಮಂಟಪ ಹೋರಾಟ ಸಮಿತಿ ಅಧ್ಯಕ್ಷರು ಹಾಗೂ ತಡೋಳಾ ರಾಜೇಶ್ವರ ಶಿವಾಚಾರ್ಯ ಸ್ವಾಮಿ ನೇತೃತ್ವದಲ್ಲಿ ‘ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ’ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆ ಅವರು ಮೂಲ ಅನುಭವ ಮಂಟಪದ ಹೋರಾಟದ ರೂಪರೇಷೆಗಳ ಬಗ್ಗೆ ಚರ್ಚೆ ಹಾಗೂ ವಿವಿಧ ಮಠಾಧೀಶರಗಳನ್ನು ಭೇಟಿ ಮಾಡಬೇಕಿತ್ತು. ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ಹಿನ್ನೆಲೆ ಮುಂಜಾಗ್ರತೆ ವಹಿಸಿ ಜಿಲ್ಲಾಧಿಕಾರಿಗಳು ಈ ಆದೇಶವನ್ನು ಪ್ರಕಟಿಸಿದ್ದಾರೆ.










