ಬೆಂಗಳೂರಿನ ರಾಜಕಾಲುವೆ ಅಭಿವೃದ್ಧಿಗೆ 1,600 ಕೋಟಿ ಡಿಪಿಆರ್ : ಸಿಎಂ ಬೊಮ್ಮಾಯಿ.

55
firstsuddi

ಬೆಂಗಳೂರು : ಮಳೆಯ ಅವಾಂತರದಿಂದಾಗಿ ರಾಜಧಾನಿ ತತ್ತರಿಸಿ ಹೋಗಿದೆ. ಇಂದು ಹಾನಿ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ವೀಕ್ಷಣೆ ಮಾಡಿದರು. ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮಳೆಯಿಂದ ಆಗುವ ಅನಾಹುತಗಳನ್ನು ತಪ್ಪಿಸಲು ರಾಜಕಾಲುವೆಗಳ ಅಭಿವೃದ್ಧಿ ಅಗತ್ಯವಿದ್ದು, ಎಲ್ಲ ಕಾಲುವೆಗಳನ್ನು ಸರಿ ಮಾಡಲು 1600 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಡಿಪಿಆರ್ ಮಾಡಿ ಆದಷ್ಟು ಬೇಗ ಕೆಲಸ ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.

ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆ ಆಗಿದೆ. ಕಳೆದ ನಲವತ್ತು ವರ್ಷಗಳಲ್ಲೇ ಈ ರೀತಿ ಮಳೆ ಇದೇ ಮೊದಲು ಬಂದಿದೆ. ಇದರಿಂದ ಬಹಳ ಜನರಿಗೆ ತೊಂದರೆಯಾಗಿದೆ. ಮೇ ತಿಂಗಳಲ್ಲಿ 15 ದಿನ ಬರಬೇಕಾದ ಮಳೆ, ಒಂದೇ ದಿನದ ನಾಲ್ಕು ಗಂಟೆಯಲ್ಲಿ ಸುರಿದಿದೆ. ಮಳೆಯಿಂದಲೂ ಕಾಮಗಾರಿಗಳಿಗೆ ಅಡ್ಡಿಯಾಗುತ್ತಿದೆ. ಆರೇಳು ವ್ಯಾಲಿಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಡಿಪಿಆರ್ ಸಿದ್ಧತೆ ಮಾಡಲಾಗುತ್ತಿದೆ. ಇದಕ್ಕೆ 1,600 ಕೋಟಿ ರೂ. ಡಿಪಿಆರ್ ಗೆ ಶೀಘ್ರವೇ ಅನುಮೋದನೆ ಸಿಗಲಿದ್ದು, ಬಳಿಕ ವ್ಯಾಲಿಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇವೆ. ತುರ್ತಾಗಿ ರಾಜಾಕಾಲುವೆಗಳ ಹೂಳು ತೆಗೆಯಲು ಸೂಚಿಸಿದ್ದೇವೆ ಎಂದು ಸಿಎಂ ಹೇಳಿದರು.