ಬೆಂಗಳೂರು : ತಾಯಿ-ಮಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದ್ದು, ಎರಡು ದಿನದ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ವೈದ್ಯೆ ಶೈಮಾ (39) ಮತ್ತು ಆರಾಧನಾ (10) ಎಂದು ಗುರುತಿಸಲಾಗಿದೆ.
ಮಗಳು ಮತ್ತು ತಾಯಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿರಾಜಪೇಟೆ ಮೂಲದ ಪತ್ನಿ ಶೈಮಾ ಮುತ್ತಪ್ಪ, ಕೋಲಾರ ಮೂಲದ ಪತಿ ನಾರಾಯಣ್ ಕಳೆದ 10 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿ ಡೆಂಟಲ್ ಡಾಕ್ಟರ್ ಆಗಿದ್ದರು.ನಾರಾಯಣ್ ಮತ್ತು ಶೈಮಾ ಇಬ್ಬರು ಒಟ್ಟಿಗೆ ಆಸ್ಪತ್ರೆಯನ್ನು ನಡೆಸುತ್ತಿದ್ದರು. ಎರಡು ದಿನಗಳ ಹಿಂದೆ ನಾರಾಯಣ್ ಮನೆಯಲ್ಲಿ ಇರಲಿಲ್ಲ. ಈ ವೇಳೆ ಮಗಳನ್ನು ನೇಣು ಹಾಕಿ, ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ.
ಎರಡು ದಿನಗಳ ಬಳಿಕ ನಾರಾಯಣ್ ಮನೆಗೆ ಬಂದು ನೋಡಿದ ಮೇಲೆ ಘಟನೆ ಬೆಳಕಿಗೆ ಬಂದಿದೆ. ಇತ್ತ ಆಸ್ಟ್ರೇಲಿಯಾದಲ್ಲಿದ್ದ ಸೈಮಾ ಸಹೋದರ ಇಂದು ಬೆಂಗಳೂರಿಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಸಹೋದರ ಕೊಟ್ಟ ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸದ್ಯ ಶೈಮಾ ಮತ್ತು ಆರಾಧನರ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನೆ ಸಂಬಂಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










