ಬೆಂಗಳೂರು : ತಂದೆಯ ತಿಥಿ ಕಾರ್ಯದ ದಿನವೇ ಮಗಳ ದುರಂತ ಅಂತ್ಯ…

86
firstsuddi

ಬೆಂಗಳೂರು : ತಂದೆಯ ತಿಥಿ ಕಾರ್ಯದ ಹಿನ್ನೆಲೆ ಅಡುಗೆ ಮಾಡುವಾಗ ಸಿಲಿಂಡರ್ ಸ್ಫೋಟಗೊಂಡು ಮಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಗಳು ಪರಮೇಶ್ವರಿ (42) ಮೃತ ಮಹಿಳೆ. ನಿನ್ನೆ ಕಾಶಿನಾಥ್ ಅವರ 6 ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕುಟುಂಬದವರು ಹಾಗೂ ಸಂಬಂಧಿಕರು ಸೇರಿ ತಿಥಿ ಕಾರ್ಯಕ್ಕಾಗಿ ಅಡುಗೆ ಮಾಡುವಾಗ ಗ್ಯಾಸ್ ಸೋರಿಕೆಯಾಗಿದ್ದು, ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ.

ಸ್ಫೋಟದ ತೀವ್ರತೆಗೆ ಪುತ್ರಿ ಪರಮೇಶ್ವರಿ ಗಂಭೀರ ಗಾಯಗೊಂಡು ಸಾವನ್ನಪ್ಪಿದರೆ, ಕಾಶಿನಾಥ್ ರ ಪತ್ನಿ ಸೌಭಾಗ್ಯ, ಮಗ ಶರವಣ, ಸಂಬಂಧಿಕರಾದ ಪರಮಶಿವಂ, ಭುವನೇಶ್ವರಿ, ಮಾಲಾ ಎಂಬುವರು ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.