ಬೆಂಗಳೂರು-ಧಾರವಾಡ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸೇವೆ ಬೆಳಗಾವಿಯವರೆಗೆ ವಿಸ್ತರಣೆ…

53
firstsuddi

ನವದೆಹಲಿ: ಬೆಂಗಳೂರು-ಧಾರವಾಡ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಬೆಳಗಾವಿಯವರೆಗೆ ವಿಸ್ತರಿಸಿ, ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ.

ಈ ಕುರಿತ ಆದೇಶವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆಯಾದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಬೆಂಗಳೂರು-ಧಾರವಾಡದಿಂದ ಬೆಳಗಾವಿಯವರೆಗೆ ವಿಸ್ತರಣೆ ಮಾಡಿ ರೈಲ್ವೆ ಸಚಿವಾಲಯ ಆದೇಶ ನೀಡಿರುವುದಾಗಿ ತಿಳಿಸಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರಿನಿಂದ ರೈಲು ಸಂಖ್ಯೆ (20661) ಪ್ರತಿ ದಿನ ಬೆಳಗ್ಗೆ 5:45ಕ್ಕೆ ಬೆಂಗಳೂರು ನಿಲ್ದಾಣದಿಂದ ಹೊರಟು ಮಧ್ಯಾಹ್ನ 1.30ಕ್ಕೆ ಬೆಳಗಾವಿ ತಲುಪಲಿದೆ. ಬೆಳಗಾವಿಯಿಂದ ರೈಲು ಸಂಖ್ಯೆ (20662) ಮಧ್ಯಾಹ್ನ 2ಕ್ಕೆ ಹೊರಟು ರಾತ್ರಿ 10ಕ್ಕೆ ಬೆಂಗಳೂರು ನಿಲ್ದಾಣ ತಲುಪಲಿದೆ.

ಹುಬ್ಬಳ್ಳಿ -ಧಾರವಾಡ ನಡುವೆ ಜೂನ್ 27ರಿಂದ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಗೊಂಡಿತ್ತು. ಆದರೆ ಬೆಳಗಾವಿಯವರೆಗೆ ವಿಸ್ತರಿಸುವ ಬೇಡಿಕೆಗೆ ಸ್ಪಂದನೆ ಸಿಕ್ಕಿರಲಿಲ್ಲ. ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಬೇಡಿಕೆಗೆ ಮಣಿದ ರೈಲ್ವೆ ಇಲಾಖೆ ಕೊನೆಗೂ ಬೆಳಗಾವಿಗೆ ಸಂಚಾರ ಪ್ರಾರಂಭಿಸುತ್ತಿದೆ.