ಬೆಂಗಳೂರು : ನಗರದಲ್ಲಿ ಏಳು ಮಕ್ಕಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಮಕ್ಕಳು ಪತ್ತೆಯಾಗಿದ್ದಾರೆ. ಪರೀಕ್ಷಿತ್, ಕಿರಣ್ ಮತ್ತು ನಂದನ್ ಪತ್ತೆಯಾದ ಮಕ್ಕಳು. ಓದಲು ಇಷ್ಟವಿಲ್ಲ. ಕಬಡ್ಡಿಯಲ್ಲಿ ಆಸಕ್ತಿಯಿದೆ. ಕ್ರೀಡೆಯಲ್ಲೇ ಸಾಧನೆ ಮಾಡುತ್ತೇವೆ ಎಂದು ಮನೆ ಬಿಟ್ಟಿದ್ದ ಈ ಮೂವರೂ ಮಕ್ಕಳು ಇದೀಗ ಚಿಂದಿ ಆಯುವ ವ್ಯಕ್ತಿಯೊಬ್ಬರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಮಕ್ಕಳನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ಬೆಳಗ್ಗೆ 7.30 ರ ಸಮಯದಲ್ಲಿ ಈ ಮೂವರು ಆನಂದ್ ರಾವ್ ಸರ್ಕಲ್ ಬಳಿ ಕಾಣಿಸಿಕೊಂಡಿದ್ದರು. ಕೂಡಲೇ ಬಾಗಲಗುಂಟೆ ಪೊಲೀಸರಿಗೆ ಮಾಹಿತಿ ರವಾನೆ ಮಾಡಲಾಗಿತ್ತು. ಸದ್ಯ ಮಕ್ಕಳು ಉಪ್ಪಾರಪೇಟೆ ಪೊಲೀಸರ ರಕ್ಷಣೆಯಲ್ಲಿದ್ದು, ಬಾಗಲಗುಂಟೆ ಪೊಲೀಸರು ಬಂದ ತಕ್ಷಣ ಮಕ್ಕಳನ್ನ ಒಪ್ಪಿಸಲಿದ್ದಾರೆ.
ಮೂವರೂ ಮಕ್ಕಳು ಶನಿವಾರ ಬೆಳಗ್ಗೆ 5.30ಕ್ಕೆ ಜಾಗಿಂಗ್ ಗೆ ಹೋಗಿಬರುವುದಾಗಿ ಮನೆಯಿಂದ ಹೊರಟಿದ್ದರು. ಮನೆಯಿಂದ ಬರುವಾಗ ತಲಾ 1,500 ರೂ. ತಂದಿದ್ದರು. ಮೊದಲು ಮಂಗಳೂರಿಗೆ ಹೋಗಲು ಪ್ಲ್ಯಾನ್ ಮಾಡಿದ್ದರು. ನಂತರ ಪ್ಲಾನ್ ಬದಲಾಯಿಸಿ ಮೈಸೂರು ಬಸ್ ಹತ್ತಿದ್ದಾರೆ. ಮೈಸೂರು ಬಸ್ ಸ್ಟಾಪ್ ನಲ್ಲಿ ಶನಿವಾರ ಇಡೀ ದಿನ ಉಳಿದುಕೊಂಡಿದ್ದಾರೆ. ಮೈಸೂರಿಗೆ ತೆರಳಿ ದಸರಾ ಹಬ್ಬ ನೋಡಿಕೊಂಡು ಬಂದಿದ್ದಾರೆ. ಭಾನುವಾರ ಕೂಡ ಮೈಸೂರಿನಲ್ಲಿ ಕಾಲ ಕಳೆದಿದ್ದಾರೆ. ಮತ್ತೆ ಭಾನುವಾರ ರಾತ್ರಿ ಮೈಸೂರಿನಿಂದ ಟ್ರೈನ್ ಹತ್ತಿ, ಬೆಂಗಳೂರಿಗೆ ವಾಪಸಾಗಿದ್ದಾರೆ. ಬೆಳಗ್ಗೆ ಆನಂದ್ ರಾವ್ ಸರ್ಕಲ್ ಬಳಿ ಬಂದಿಳಿದಾಗ, ಪೇಪರ್ ಆಯುವ ವ್ಯಕ್ತಿಯ ಬಳಿ ಕೆಲಸ ಕೇಳಿದ್ದಾರೆ. ಮಕ್ಕಳ ನಾಪತ್ತೆ ಪ್ರಕರಣ ವಿಚಾರ ತಿಳಿದಿದ್ದ ಪೇಪರ್ ಆಯುವ ವ್ಯಕ್ತಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಮಕ್ಕಳ ರಕ್ಷಣೆ ಮಾಡಿದ್ದಾರೆ.
ಆನಂದ್ ರಾವ್ ಸರ್ಕಲ್ ಗೆ ಬರುವ ಮುನ್ನ ಮೂವರೂ ಮಕ್ಕಳು ಕಂಠೀರವ ಸ್ಟೇಡಿಯಂ ಗೆ ಹೋಗಿದ್ದಾರೆ. ಅಲ್ಲಿನ ಸ್ಪೋರ್ಟ್ಸ್ ಎಲ್ಲವನ್ನು ನೋಡಿ ಬಂದಿದ್ದಾರೆ. ಅಲ್ಲಿ ಕಬಡ್ಡಿಗೆ ಸೇರಿಕೊಳ್ಳೋಣ ಎಂದೂ ಪರೀಕ್ಷಿತ್, ಕಿರಣ್, ನಂದನ್ ಮಾತುಕತೆ ನಡೆಸಿದ್ದಾರೆ. ಪ್ರಸ್ತುತ ಪತ್ತೆಯಾಗಿರುವ ಪರೀಕ್ಷಿತ್, ಕಿರಣ್ ಮತ್ತು ನಂದನ್ ಎಂಬ ಮಕ್ಕಳು ಬಾಗಲಗುಂಟೆ ನಿವಾಸಿಗಳು.
ಇನ್ನೂ ಮತ್ತೊಂದು ಪ್ರಕರಣದಲ್ಲಿ ನಾಲ್ಕು ಮಕ್ಕಳು ನಾಪತ್ತೆಯಾಗಿದ್ದು, ಸೋಲದೇವನಹಳ್ಳಿ ನಿವಾಸಿಗಳಾದ ರಾಯನ್, ವರ್ಷಿಣಿ, ಭೂಮಿ ಮತ್ತು ಚಿಂತನ್ ಇನ್ನೂ ಪತ್ತೆಯಾಗಿಲ್ಲ. ಸೋಲದೇವನಹಳ್ಳಿ ಪೊಲೀಸರು ಇವರಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.










