ಬೆಳ್ಳಂಬೆಳಗ್ಗೆ ಸರ್ಕಾರದ ಗುತ್ತಿಗೆದಾರ ರಾಮಕೃಷ್ಣೇಗೌಡ ಮನೆ ಮೇಲೆ ಐಟಿ ದಾಳಿ.

25

ಮೈಸೂರು: ಸರ್ಕಾರದ ವಿವಿಧ ಕಾಮಗಾರಿಗಳ ಗುತ್ತಿಗೆ ವಹಿಸಿಕೊಂಡಿರುವ ಕಾಂಟ್ರಾಕ್ಟರ್ ರಾಮಕೃಷ್ಣೇಗೌಡ ಮನೆ, ಎಂ ಪ್ರೋ ಪ್ಯಾಲೇಸ್, ಹೋಟೆಲ್, ಕಲ್ಯಾಣ ಮಂಟಪ ಸೇರಿದಂತೆ ಮೈಸೂರಿನ ಹಲವೆಡೆ ಇಂದು ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹತ್ತಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದೆ. ಮೈಸೂರಿನ ದೇವೇಗೌಡ ವೃತ್ತದ ಬಳಿ ಇರುವ ಎಂ ಪ್ರೋ ಪ್ಯಾಲೇಸ್ ಬಳಿ ಬರುತ್ತಿದ್ದಂತೆಯೇ ಭದ್ರತಾ ಸಿಬ್ಬಂದಿಯ ಮೊಬೈಲ್ ಕಿತ್ತುಕೊಂಡಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸುಮಾರು ಮೂರು ಗಂಟೆಗಳಿಂದ ಪರಿಶೀಲನೆ ಮಾಡುತ್ತಿದ್ದಾರೆ. ಮೈಸೂರಿನ ರಾಮಕೃಷ್ಣನಗರದಲ್ಲಿರುವ ಗುತ್ತಿಗೆದಾರ ರಾಮಕೃಷ್ಣೇಗೌಡ ನಿವಾಸದ ಮೇಲೂ ದಾಳಿ ನಡೆದಿದೆ. ರಾಮಕೃಷ್ಣೇಗೌಡ ಸರ್ಕಾರದ ಕಂಟ್ರಾಕ್ಟರ್ ಕೆಲಸ ಮಾಡಿಸುತ್ತಿದ್ದಾರೆ. ಇಟ್ಟಿಗೆ ಫ್ಯಾಕ್ಟರಿ ಸೇರಿ ಇನ್ನಿತರ ವ್ಯವಹಾರ ನಡೆಸುತ್ತಿದ್ದಾರೆ. ರಾಮಕೃಷ್ಣೇಗೌಡ ನಿವಾಸದಲ್ಲಿ ಐಟಿ ಅಧಿಕಾರಿಗಳಿಂದ ಶೋಧ ಕಾರ್ಯ ಮುಂದುವರಿದಿದೆ. ರಾಮಕೃಷ್ಣೇಗೌಡ ಕಾರನ್ನೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಕಾರಿನಲ್ಲಿದ್ದ ದಾಖಲೆ ಪತ್ರಗಳನ್ನು ಮನೆಯೊಳಗೆ ತಗೆದುಕೊಂಡು ಹೋಗಿ ಪರಿಶೀಲನೆಯನ್ನು ಮುಂದುವರಿಸಿದ್ದಾರೆ.