ಬ್ರಿಟನ್‌ನ ಗೃಹ ಕಾರ್ಯದರ್ಶಿಯಾಗಿ ಭಾರತೀಯ ಮೂಲದ ಸುಯೆಲ್ಲಾ ಬ್ರೆವರ್‌ಮನ್ ನೇಮಕ…

71
firstsuddi

ಲಂಡನ್ : ಭಾರತೀಯ ಮೂಲದ ಸುಯೆಲ್ಲಾ ಬ್ರೆವರ್‌ಮನ್ ಅವರು ಬ್ರಿಟನ್ ನ ನೂತನ ಗೃಹ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. 42 ವರ್ಷದ ಸುಯೆಲ್ಲಾ ಬ್ರೆವರ್‌ಮನ್ ಅವರು ಆಗ್ನೇಯ ಇಂಗ್ಲೆಂಡ್ ನ ಫೇರ್ ಹ್ಯಾಮ್ ಕ್ಷೇತ್ರದ ಕನ್ಸರ್ವೇಟಿವ್ ಪಾರ್ಟಿ ಸಂಸದೆಯಾಗಿದ್ದಾರೆ. ಅವರು ಬೋರಿಸ್ ಜಾನ್ಸನ್ ನೇತೃತ್ವದ ಸರ್ಕಾರದಲ್ಲಿ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.

ಸುಯೆಲ್ಲಾ ಬ್ರೆವರ್‌ಮನ್ ಅವರು ಜನಿಸಿದ್ದು 1980ರ ಏಪ್ರಿಲ್ 3ರಂದು. ಅವರ ತಾಯಿ ಉಮಾ ತಮಿಳುನಾಡು ಮೂಲದವರು. ತಂದೆ ಗೋವಾ ಮೂಲದ ಕ್ರಿಸ್ಟಿ ಫೆರ್ನಾಂಡಿಸ್. ಅವರ ತಾಯಿ ಮಾರಿಷಸ್ ನಿಂದ ಬ್ರಿಟನ್ ಗೆ ವಲಸೆ ಹೋಗಿದ್ದರು. 1960ರ ದಶಕದಲ್ಲಿ ತಂದೆ ಕೀನ್ಯಾದಿಂದ ಬ್ರಿಟನ್ ಗೆ ವಲಸೆ ಹೋಗಿದ್ದರು. ಸುಯೆಲ್ಲಾ ಅವರು 2018ರಲ್ಲಿ ರಾಯೆಲ್ ಬ್ರೆವರ್‌ಮನ್ ಅವರನ್ನು ಮದುವೆಯಾದರು. 2019ರಲ್ಲಿ ಮತ್ತು 2021ರಲ್ಲಿ ಅವರು ಮಕ್ಕಳಿಗೆ ಜನ್ಮ ನೀಡಿದರು.

ಬ್ರಿಟನ್ ನ ಗೃಹ ಕಾರ್ಯದರ್ಶಿಯಾಗಿದ್ದ ಭಾರತ ಮೂಲದ ಪ್ರೀತಿ ಪಟೇಲ್ ಅವರು, ಲಿಜ್ ಟ್ರಸ್ ಅವರು ಅಧಿಕೃತವಾಗಿ ಪ್ರಧಾನಿ ಗಾದಿಯನ್ನು ಸ್ವೀಕರಿಸಿದ ಬಳಿಕ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ಪ್ರಕಟಿಸಿದ್ದರು. ಇದೀಗ ಪ್ರೀತಿ ಪಟೇಲ್ ಅವರ ಸ್ಥಾನಕ್ಕೆ ಸುಯೆಲ್ಲಾ ಬ್ರೆವರ್‌ಮನ್ ನೇಮಕವಾಗಿದ್ದಾರೆ.