ಭಾರತೀಯ ಮೂಲದ ಕಾಫ್ ಸಿರಪ್ ಸೇವಿಸಿ 66 ಮಕ್ಕಳು ಸಾವು : ತನಿಖೆಗೆ ಸೂಚಿಸಿದ ವಿಶ್ವಸಂಸ್ಥೆ.

46
firstsuddi

ನವದೆಹಲಿ: ಭಾರತ ಮೂಲದ ಕಂಪನಿಯು ತಯಾರಿಸಿದ ಕೆಮ್ಮು, ಶೀತಕ್ಕೆ ನೀಡುವ ಔಷಧಿ ಕುಡಿದು ಆಫ್ರಿಕಾದ 66 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶಂಕಿಸಿದ್ದು, ತ್ವರಿತ ತನಿಖೆಗೆ ಕೇಂದ್ರ ಔಷಧ ನಿಯಂತ್ರಕ ಮಂಡಳಿ(ಸಿಡಿಎಸ್ ಸಿಒ)ಗೆ ಸೂಚಿಸಿದೆ.

ದೆಹಲಿ ಮೂಲದ ಖಾಸಗಿ ಕಂಪನಿ ಈ ಔಷಧವನ್ನು ತಯಾರಿಸಿದ್ದು, ಇದನ್ನು ಆಫ್ರಿಕಾದ ಗ್ಯಾಂಬಿಯಾಗೆ ರಫ್ತು ಮಾಡಿತ್ತು. ಆ ಸಿರಪ್ ಕುಡಿದ 66 ಮಕ್ಕಳು ಕಿಡ್ನಿ ಸೋಂಕಿನಿಂದ ಬಳಲಿ ಸಾವನ್ನಪ್ಪಿರಬಹುದು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಆದ್ದರಿಂದ ತಕ್ಷಣವೇ ಕಂಪನಿ ತಯಾರಿಸುವ 4 ಸಿರಪ್ ಗಳ ಮೇಲೆ ತನಿಖೆ ನಡೆಸಲು ಆದೇಶಿಸಿದೆ.

ಭಾರತೀಯ ಮೂಲದ ಕಂಪನಿ ತಯಾರಿಸಿರುವ ಸಿರಪ್ ನಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ವಿಶ್ಲೇಷಣೆಯಿಂದ ದೃಢಪಟ್ಟಿದೆ. ಈ ಔಷಧಿಗಳನ್ನು ಮಾರುಕಟ್ಟೆಯಿಂದ ತೆಗೆದುಹಾಕುವಂತೆ WHO ಎಲ್ಲಾ ದೇಶಗಳಿಗೆ ಎಚ್ಚರಿಕೆ ನೀಡಿದೆ.

ಈ ಕಂಪನಿಯು ದೆಹಲಿ, ಹರಿಯಾಣದಲ್ಲಿ ಉತ್ಪನ್ನಗಳನ್ನು ತಯಾರಿಸುತ್ತಿದೆ. ಇದಕ್ಕೆ ರಾಜ್ಯ ಔಷಧ ನಿಯಂತ್ರಕರಿಂದ ಪರವಾನಗಿ ಪಡೆದಿದೆ. ಕಂಪನಿಯು ಈ ಉತ್ಪನ್ನಗಳನ್ನು ಇಲ್ಲಿಯವರೆಗೆ ಗ್ಯಾಂಬಿಯಾಕ್ಕೆ ಮಾತ್ರ ತಯಾರಿಸಿ ರಫ್ತು ಮಾಡಿದೆ ಎಂದು ತಿಳಿದುಬಂದಿದೆ.

ಇಂತಹ ಕೆಮ್ಮು ಸಿರಪ್ ಗಳ ವಿಷಕಾರಿ ಪರಿಣಾಮಗಳೆಂದರೆ ಹೊಟ್ಟೆ ನೋವು, ತಲೆನೋವು, ವಾಂತಿ, ಅತಿಸಾರ, ಮೂತ್ರ ವಿಸರ್ಜನೆಯ ತೊಂದರೆ, ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ ಮತ್ತು ತೀವ್ರ ಮೂತ್ರಪಿಂಡ ಹಾನಿ. ಇವು ಸಾವಿಗೆ ಕಾರಣವಾಗಬಹುದು.