ಭಾರತೀಯ ರಾಜ್ಯದ ವಿರುದ್ಧವೇ ಹೋರಾಡುತ್ತಿದ್ದೇವೆ: ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ತಿರುಗೇಟು.

30

ನವದೆಹಲಿ : ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೀಡಿದ ‘ಭಾರತೀಯ ರಾಜ್ಯದ ವಿರುದ್ಧವೇ ಹೋರಾಡುತ್ತಿದ್ದೇವೆ’ ಎಂಬ ಹೇಳಿಕೆ ಭಾರೀ ವಿವಾದ ಸೃಷ್ಟಿಸಿತ್ತು. ಈ ಹೇಳಿಕೆ ಕುರಿತು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ನಾವು ಬಿಜೆಪಿ, ಆರ್‍ಎಸ್‍ಎಸ್ ಜೊತೆಗೆ ಭಾರತದ ರಾಜ್ಯದ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಹೇಳಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕಾಂಗ್ರೆಸ್‍ನ ಕೊಳಕು ಸತ್ಯ ಈಗ ಬಹಿರಂಗವಾಗಿದೆ ಎಂದು ಹೇಳಿದ್ದಾರೆ. ಇದು ಕಾಂಗ್ರೆಸ್‍ನ ಕರಾಳ ಮುಖ ಎಂದು ಬಿಜೆಪಿ ಟೀಕಿಸಿದೆ. ದೆಹಲಿಯಲ್ಲಿ ಇಂದು ನಡೆದ ಕಾಂಗ್ರೆಸ್ ಕೇಂದ್ರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಾ, ಆರ್‍ಎಸ್‍ಎಸ್ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ವಿಪಕ್ಷಗಳು ಇಂದು ಬಿಜೆಪಿ, ಆರ್‍ಎಸ್‍ಎಸ್ ವಿರುದ್ಧ ಮಾತ್ರವಲ್ಲ, ಭಾರತದ ವಿರುದ್ಧವೂ ಹೋರಾಡುತ್ತಿವೆ ಎಂದು ಹೇಳಿದರು. ಪಕ್ಷ ಮತ್ತು ಸಂಘಟನೆಗಳ ಮಧ್ಯೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಇರಬಹುದು. ಆದರೆ, ದೇಶ ಎಲ್ಲರಿಗೂ ಒಂದೇ. ಅಂತಹ ದೇಶದ ವಿರುದ್ಧವೇ ರಾಹುಲ್ ಗಾಂಧಿ ಹೋರಾಡಲು ಕರೆ ನೀಡಿದ್ದಾರೆ. ಇದು ರಾಷ್ಟ್ರಕ್ಕೆ ಮಾಡಿದ ಅವಮಾನ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ಭಾರತವು ಒಬ್ಬ ಜವಾಬ್ದಾರಿಯುತ ಮತ್ತು ನಿಷ್ಣಾವಂತ ವಿಪಕ್ಷ ನಾಯಕನ ಹೊಂದಲು ಅರ್ಹವಾಗಿದೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದರು. ಬಿಜೆಪಿ, ಆರ್‍ಎಸ್‍ಎಸ್ ದೇಶ ಕಟ್ಟಲು ಪ್ರಯತ್ನಿಸುತ್ತಿದ್ದರೆ, ಇತ್ತ ರಾಹುಲ್ ಗಾಂಧಿ ದೇಶದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ರಾಹುಲ್ ಅರೆಕಾಲಿಕ ಮತ್ತು ಅಪಕ್ವ ವಿಪಕ್ಷ ನಾಯಕರಾಗಿದ್ದಾರೆ. ಇದು ದೇಶದ ದೌರ್ಭಾಗ್ಯವಾಗಿದೆ. ವಿದೇಶಿ ವ್ಯಕ್ತಿಗಳೊಂದಿಗೆ ಸೇರಿ ದೇಶದ ಸಮಗ್ರತೆ, ಸಾರ್ವಭೌಮತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದರು.