ಭಾರತ್ ಜೋಡೋ ಪಾದಯಾತ್ರೆಯಲ್ಲಿ ಬ್ಯಾಂಡ್ ಬಾರಿಸಿದ ಡಿಕೆಶಿ.

71
firstsuddi

ರಾಯಚೂರು : ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ರಾಯಚೂರಿನಲ್ಲಿ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು ಬೆಳಗ್ಗೆ 6:10ಕ್ಕೆ ರಾಯಚೂರು ತಾಲೂಕಿನ ಯರಗೇರಾ ದಿಂದ ಪಾದಯಾತ್ರೆ ಆರಂಭವಾಯಿತು. ರಾಹುಲ್ ಗಾಂಧಿ ಜೊತೆ ಡಿಕೆ ಶಿವಕುಮಾರ್, ಕೆ.ಸಿ. ವೇಣುಗೋಪಾಲ್, ಸಿದ್ದರಾಮಯ್ಯ ಸುರ್ಜೇವಾಲಾ ಸೇರಿದಂತೆ ಹಲವಾರು ಮುಖಂಡರು ಸಾಥ್ ನೀಡಿದರು.

ರಾಯಚೂರಿನ ಯರಗೇರಾದಲ್ಲಿ ಮಾಜಿ ಸೈನಿಕರು ರಾಹುಲ್ ಗಾಂಧಿಯನ್ನು ಭೇಟಿಯಾಗಿ ಪಾದಯಾತ್ರೆಯಲ್ಲಿ ಭಾಗವಹಿಸಿದರು. ಈ ವೇಳೆ ಮಾಜಿ ಸೈನಿಕರೊಂದಿಗೆ ರಾಷ್ಟ್ರಧ್ವಜ ಹಿಡಿದು ಸುಮಾರು 100 ಮೀಟರ್ ಗೂ ಹೆಚ್ಚು ದೂರ ರಾಹುಲ್ ಗಾಂಧಿ ಓಡಿದರು. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕೇರಳದ ಬ್ಯಾಂಡ್ ತಂಡದ ಜೊತೆ ಸೇರಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬ್ಯಾಂಡ್ ಬಾರಿಸುವ ಮೂಲಕ ಗಮನ ಸೆಳೆದರು.

ಬೃಂದಾವನ ಹೋಟೆಲ್ ನಲ್ಲಿ ಉಪಹಾರ, ಊಟದ ವ್ಯವಸ್ಥೆ ಮಾಡಲಾಗಿದ್ದು ರಾಹುಲ್ ಗಾಂಧಿ ಹಾಗೂ ಪಾದಯಾತ್ರಿಗಳು ವಿರಾಮ ತೆಗೆದುಕೊಂಡರು. ಹೋಟೆಲ್ ಆವರಣದಲ್ಲಿ ಕೃಷಿ ಕಾರ್ಮಿಕರರೊಂದಿಗೆ ರಾಹುಲ್ ಗಾಂಧಿ ಚರ್ಚೆ ನಡೆಸಲಿದ್ದಾರೆ. ಬಳಿಕ ಸಂಜೆ 4 ಗಂಟೆಗೆ ಪುನಃ ಪಾದಯಾತ್ರೆ ಆರಂಭವಾಗಲಿದೆ. ಸಂಜೆ 6 ಗಂಟೆಗೆ ನಗರದ ವಾಲ್ಕಾಟ್ ಮೈದಾನದಲ್ಲಿ ಸೆಮಿ ಪಬ್ಲಿಕ್ ಮೀಟಿಂಗ್ ನಡೆಯಲಿದೆ. ಬಳಿಕ ಯರಮರಸ್ ಬಳಿ ಆನಂದ್ ಪಬ್ಲಿಕ್ ಶಾಲೆಯಲ್ಲಿ ರಾಹುಲ್ ಗಾಂಧಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.