ಆಂಧ್ರಪ್ರದೇಶ: ಭೀಕರ ರಸ್ತೆ ಅಪಘಾತದಲ್ಲಿ ಬಸ್ಸೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿರುವ ಘಟನೆ ನಿನ್ನೆ ತಡರಾತ್ರಿ ಪ್ರಕಾಶಂ ಜಿಲ್ಲೆಯ ದರ್ಶಿ ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದಾರೆ. ಅಪಘಾತಕ್ಕೀಡಾದವರು ಮದುವೆ ಆರತಕ್ಷತೆಗಾಗಿ ಕಾಕಿನಾಡಕ್ಕೆ ತೆರಳಲು ಬಸ್ ಬಾಡಿಗೆಗೆ ಪಡೆದಿದ್ದರು. ಚಾಲಕ ನಿದ್ರೆಗೆ ಜಾರಿದ್ದ ಕಾರಣ ಬಸ್ ನಾಲೆಗೆ ಉರುಳಿ ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮೃತರನ್ನು ಪೊದಿಲಿ ಗ್ರಾಮದ ಅಬ್ದುಲ್ ಅಜೀಜ್ (65), ಅಬ್ದುಲ್ ಹನಿ (60), ಶೇಖ್ ರಮೀಜ್ (48), ಮುಲ್ಲಾ ನೂರ್ ಜಹಾನ್ (58), ಮುಲ್ಲಾ ಜಾನಿ ಬೇಗಂ (65), ಶೇಖ್ ಶಬೀನಾ (35) ಮತ್ತು ಶೇಖ್ ಹೀನಾ (6) ಎಂದು ಗುರುತಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.










