ಭೀಕರ ಸ್ಫೋಟ – 12 ಮಂದಿ ಪೊಲೀಸರು ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ…

44
firstsuddi

ಇಸ್ಲಾಮಾಬಾದ್: ಪಾಕಿಸ್ತಾನದ ಸ್ವಾತ್‌ನ ಭಯೋತ್ಪಾದನಾ ನಿಗ್ರಹ ಕಚೇರಿಯಲ್ಲಿ ನಿನ್ನೆ ರಾತ್ರಿ ಭೀಕರ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 12 ಪೊಲೀಸರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಸದ್ಯ ಘಟನಾ ಸ್ಥಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಪೊಲೀಸ್ ಮಹಾನಿರೀಕ್ಷಕ ಅಖ್ತರ್ ಹಯಾತ್ ಖಾನ್ ಹೇಳಿದ್ದಾರೆ. ಘಟನೆ ಕುರಿತು ಮಾತನಾಡಿರುವ ಭಯೋತ್ಪಾದನಾ ನಿಗ್ರಹ ಇಲಾಖೆ ಡಿಐಜಿ ಖಾಲಿದ್ ಸೊಹೈಲ್, ಪೊಲೀಸ್ ಠಾಣೆಯ ಮೇಲೆ ಯಾವುದೇ ಬಾಂಬ್ ದಾಳಿ ಅಥವಾ ಗುಂಡಿನ ದಾಳಿ ನಡೆದಿಲ್ಲ. ಇದು ಆತ್ಮಹತ್ಯಾ ದಾಳಿಯೂ ಅಲ್ಲ. ಮದ್ದುಗುಂಡುಗಳು ಮತ್ತು ಶೆಲ್‌ಗಳನ್ನು ಸಂಗ್ರಹಿಸಿದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ. ಹೊರತಾಗಿ ಪೊಲೀಸ್ ಠಾಣೆಯ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸ್ಫೋಟಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಬಾಂಬ್ ನಿಷ್ಕ್ರಿಯ ದಳಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿವೆ. ಕುಸಿದ ಕಟ್ಟಡ ಅತ್ಯಂತ ಹಳೆಯದಾಗಿತ್ತು. ಹಾಗಾಗಿ ಸಿಬ್ಬಂದಿಯನ್ನ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಿಟಿಡಿ ಡಿಐಜಿ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧಿಕಾರಿ ಶಫಿ ಉಲ್ಲಾ ಗಂಡಾಪುರ (ಡಿಪಿಒ) ಈ ಸ್ಫೋಟವನ್ನು ‘ಆತ್ಮಹತ್ಯಾ ದಾಳಿ’ ಎಂದು ಹೇಳಿದ್ದರು. ದಾಳಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸ್ಫೋಟವನ್ನು ಖಂಡಿಸಿದರು ಮತ್ತು ಘಟನೆಯಲ್ಲಿ ಮೃತಪಟ್ಟ ಅಧಿಕಾರಿಗಳಿಗೆ ದುಃಖ ವ್ಯಕ್ತಪಡಿಸಿದರು.