ಭೂ ಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಕೈಜೋಡಿಸಿದ್ದಾರೆ: ಬಿಗ್‍ಬಾಸ್ ಖ್ಯಾತಿಯ ಲಾಯರ್ ಜಗದೀಶ್.

31

ಬೆಂಗಳೂರು: ಆಡುವ ಮಾತಿನ ಮೇಲೆ ಹಿಡಿತವಿಲ್ಲದ ಕಾರಣದಿಂದಾಗಿ ಕನ್ನಡ ಬಿಗ್‍ಬಾಸ್ ಸೀಸನ್ 11 ಕಾರ್ಯಕ್ರಮದಿಂದ ಹೋರ ಬಂದಿರುವ ಬೆಂಗಳೂರಿನ ಖ್ಯಾತ ವಕೀಲ ಕೆ.ಎನ್ ಜಗದೀಶ್ ಅವರು ಬೆಂಗಳೂರು ನಗರದಲ್ಲಿ ಕಳೆದ ವಾರದಿಂದ ಸುರಿದ ಧಾರಕಾರ ಮಳೆಯಿಂದಾಗಿ ಆಗಿರುವ ಅವಾಂತರಗಳ ಬಗ್ಗೆ ಧ್ವನಿಯೆತ್ತಿದ್ದಾರೆ. ಪ್ರತಿಷ್ಠಿತ ಏರಿಯಾಗಳೆನಿಸಿರುವ ಭದ್ರಪ್ಪ ಲೇಔಟ್, ಕೊಡಿಗೇಹಳ್ಳಿ ಮತ್ತು ಟಾಟಾ ನಗರಗಳಲ್ಲಿ ಅಕ್ರಮವಾಗಿ ಅಪಾರ್ಟ್‍ಮೆಂಟ್ ಗಳನ್ನು ಕಟ್ಟಿರುವುದರಿಂದ ಮಳೆನೀರು ರಸ್ತೆಗಳಿಗೆ ಮತ್ತು ಮನೆ ಒಳಗೆ ನುಗ್ಗುತ್ತಿದೆ ಎಂದು ಲಾಯರ್ ಜಗದೀಶ್ ಸುದ್ದಿಗಾರರಿಗೆ ಹೇಳಿದ್ದಾರೆ. ಈ ಪ್ರದೇಶಗಳಲ್ಲಿನ ಭೂ ಮಾಫಿಯಾ ನಡೆಸುತ್ತಿದ್ದು ಇದರ ಜೊತೆ ಬಿಬಿಎಂಪಿ ಅಧಿಕಾರಿಗಳು ಕೈಜೋಡಿಸಿರುವರೆಂದು ಖ್ಯಾತ ಲಾಯರ್ ಜಗದೀಶ್ ಹೇಳುತ್ತಾರೆ. ಕೊಡಿಗೇಹಳ್ಳಿಯ ಕೆರೆಯನ್ನು ಶೇಕಡಾ 40ರಷ್ಟು ಒತ್ತುವರಿ ಮಾಡಿಕೊಳ್ಳಲಾಗಿದೆ, ಪ್ರದೇಶದ ರಾಜಾಕಾಲುವೆಗಳ ಮೇಲೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗಿದೆ, ಕೆಂಪೇಗೌಡ ಅವರ ಕಾಲದಲ್ಲಿ ಅಪಾರ ಸಂಖ್ಯೆಯಲ್ಲಿದ್ದ ಕೆರೆಗಳು ಈಗ ಬೆರಳೆಣಿಕೆಯಷ್ಟು ಮಾತ್ರ ಉಳಿದಿವೆ ಎಂದು ಲಾಯರ್ ಜಗದೀಶ್ ಮಾಧ್ಯಮದವರಿಗೆ ತಿಳಿಸಿದ್ದಾರೆ.