ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದ ಹೆಡ್ಕಾನ್ಸ್ಟೇಬಲ್ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸೋಮನಗೌಡ ಚೌಧರಿ (31) ಮೃತ ದುರ್ದೈವಿ. 2016ರ ಬ್ಯಾಚ್ನ ಸೋಮನಗೌಡ ಚೌಧರಿ ಮಂಗಳೂರು ಸಿಎಆರ್ ಕಾನ್ಸ್ಟೇಬಲ್ ಆಗಿ ವೃತ್ತಿಗೆ ಸೇರ್ಪಡೆಗೊಂಡಿದ್ದರು. ಬಳಿಕ ಹೆಡ್ ಕಾನ್ಸ್ಟೇಬಲ್ ಆಗಿ ಬಡ್ತಿ ಪಡೆದು, ಇದೀಗ ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕಂಟ್ರೋಲ್ ರೂಮ್ ಇನ್ಸ್ಪೆಕ್ಟರ್ ರ ವಾಹನ ಚಾಲಕರಾಗಿ ಕರ್ತವ್ಯದಲ್ಲಿದ್ದರು. ಮೂರು ವರ್ಷಗಳ ಹಿಂದೆ ಅವರಿಗೆ ವಿವಾಹವಾಗಿತ್ತು.
ಕರ್ತವ್ಯದಲ್ಲಿದ್ದ ಸೋಮನಗೌಡ ಅವರು ತನ್ನ ಮೇಲಾಧಿಕಾರಿಗೆ ಜ್ವರ ಎಂದು ಅವರನ್ನು ಆಸ್ಪತ್ರೆಗೆ ಬಿಟ್ಟು ಜೀಪ್ ಬಳಿ ಬಂದಾಗ ಹೃದಯಾಘಾತ ಸಂಭವಿಸಿದೆ. ತಕ್ಷಣ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ದಾರಿ ಮಧ್ಯೆ ಸೋಮನಗೌಡ ಮೃತಪಟ್ಟಿದ್ದಾರೆ. ಮಂಗಳೂರಿನಲ್ಲೇ ಸೋಮನಗೌಡ ಅಂತ್ಯಕ್ರಿಯೆ ನಡೆಯಲಿದೆ.
ಸೋಮನಗೌಡ ಅವರು ಕೋವಿಡ್ ಸಂದರ್ಭದಲ್ಲಿ ಸ್ವಂತ ಹಣದಿಂದ ಬಡವರಿಗೆ ರೇಷನ್ ಹಂಚಿ ನೆರವಾಗಿದ್ದರು. ವರ್ಷಕ್ಕೆ ಎರಡು ಬಾರಿ ರಕ್ತದಾನ ಮಾಡುತ್ತಿದ್ದರು. ಸರ್ಕಾರಿ ಸೇವೆಯ ಜೊತೆಗೆ ಸಮಾಜ ಸೇವೆಗಳಲ್ಲೂ ತೊಡಗಿಸಿಕೊಂಡಿದ್ದರು.










