ಮಂಗಳೂರು : ನಗರದ ಹಂಪನಕಟ್ಟೆ ಬಳಿಯ ವೆನ್ಲಾಕ್ ಆಸ್ಪತ್ರೆಯ ಎದುರು ಬೈಕ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ ಎರಡೂ ವಾಹನಗಳು ಹೊತ್ತಿ ಉರಿದಿದೆ. ಇಂದು ಮಧ್ಯಾಹ್ನ 2.30ರ ಸುಮಾರಿಗೆ ಘಟನೆ ನಡೆದಿದೆ.
ಖಾಸಗಿ ಸಿಟಿ ಬಸ್ ಹಂಪನಕಟ್ಟೆ ಸಿಗ್ನಲ್ ದಾಟಿ ಮುಂದೆ ಚಲಿಸುತ್ತಿದ್ದಂತೆ ಹಂಪನಕಟ್ಟೆಯಿಂದ ವೆಲೆನ್ಸಿಯ ಕಡೆಗೆ ಹೋಗುತ್ತಿದ್ದ ಬೈಕೊಂದು ಬಸ್ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಬಸ್ ಚಕ್ರದಡಿ ಬಿದ್ದಿದ್ದು, ಬೈಕ್ ನ ಪೆಟ್ರೋಲ್ ಟ್ಯಾಂಕ್ ಸಿಡಿದು ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಬಸ್ ನ ಡೀಸೆಲ್ ಟ್ಯಾಂಕ್ ಗೆ ಬೆಂಕಿ ಆವರಿಸಿಕೊಂಡು ಬಸ್ ಕೂಡ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಬೈಕ್ ಸವಾರ ಬಲ್ಲಾಳ್ ಬಾಗ್ನ ಡೈಲನ್ (26) ಎಂಬುವರ ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಅಪಘಾತವಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಬಸ್ ನಲ್ಲಿದ್ದ ಪ್ರಯಾಣಿಕರು, ಚಾಲಕ, ನಿರ್ವಾಹಕರು ಕೆಳಗಿಳಿದು ಪಾರಾಗಿದ್ದಾರೆ. ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










