ಮಂಗಳೂರು : ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾದ ಕೊರೊನಾ ಶಂಕಿತ ವ್ಯಕ್ತಿ ಕೊನೆಗೂ ಪತ್ತೆ…

200
firstsuddi

ಮಂಗಳೂರು : ವೆನ್ಲಾಕ್ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ಕೊರೊನಾ ಶಂಕಿತ ವ್ಯಕ್ತಿಯನ್ನು ಪತ್ತೆ ಮಾಡಲಾಗಿದೆ. ಶಂಕಿತ ವ್ಯಕ್ತಿ ಬಂಟ್ವಾಳ ತಾಲ್ಲೂಕಿನ ವಿಟ್ಲ ಸಮೀಪದ ರಂಗರಮಜಲು ಗ್ರಾಮದ ತನ್ನ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದು, ಸದ್ಯ ಆ ವ್ಯಕ್ತಿಯನ್ನು ವೈದ್ಯಾಧಿಕಾರಿಗಳು ಮನವೊಲಿಸಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಭಾನುವಾರ ತಡರಾತ್ರಿ ವ್ಯಕ್ತಿ ದುಬೈಯಿಂದ ಮಂಗಳೂರಿಗೆ ಬಂದಿಳಿದಿದ್ದು, ಈ ವೇಳೆ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯನ್ನು ತಪಾಸಣೆ ನಡೆಸಿದಾಗ ಜ್ವರ ಕಂಡುಬಂದ ಹಿನ್ನೆಲೆ, ಮುಂಜಾಗೃತ ಕ್ರಮವಾಗಿ ವ್ಯಕ್ತಿಯನ್ನು ವೆನ್ಲಾಕ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆ ವ್ಯಕ್ತಿ ನಿನ್ನೆ ಬೆಳಗಿನ ಜಾವ ಆಸ್ಪತ್ರೆಯಿಂದ ಪರಾರಿಯಾಗಿ ಜನರಲ್ಲಿ ಆತಂಕ ಮೂಡಿಸಿದ್ದರು. ಅಲ್ಲದೇ ಈ ಬಗ್ಗೆ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅಧಿಕಾರಿಗಳೊಂದಿಗೆ ಸೇರಿ ಹುಡುಕಾಟ ನಡೆಸಿ ಕೊನೆಗೂ ಶಂಕಿತ ವ್ಯಕ್ತಿಯನ್ನು ಪತ್ತೆಹಚ್ಚಿದ್ದಾರೆ.