ಚಿಕ್ಕಮಗಳೂರು:- ಮಕ್ಕಳು ವಿದ್ಯಾರ್ಥಿ ದೆಸೆಯಲ್ಲಿ ಯಾವುದೇ ಆಕರ್ಷಣೆಗಳಿಗೆ ಒಳಗಾಗದೇ ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡಬೇಕು ಎಂದು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಜೋಶಿ ಸಲಹೆ ಮಾಡಿದರು.
ನಗರದ ಗಾಯತ್ರಿದೇವಿ ಕಲ್ಯಾಣ ಮಂಟಪದಲ್ಲಿ ನಡೆದ ಸಮೃದ್ಧಿ ಕಿಡ್ಸ್‍ಕ್ರಿಯೇಟಿವಿಟಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ದೆಸೆಯಲ್ಲಿ ಹಲವಾರು ಆಕರ್ಷಣೆಗಳಿರುತ್ತವೆ ನಾವು ಅವುಗಳಿಗೆ ಮನಸೋತು ದಾಸರಾದರೆ ಶಿಕ್ಷಣ ದಾರಿ ತಪ್ಪುತ್ತದೆ ನಮ್ಮ ಬದುಕಿನ ಅದ: ಪತನವಾಗುತ್ತದೆ ಹಾಗಾಗಿ ಮಕ್ಕಳು ವಿದ್ಯಾರ್ಥಿ ದೆಸೆಯಲ್ಲಿ ಓದಿಗೆ ಮಾತ್ರ ಗಮನ ಕೊಡಬೇಕು ಎಂದು ಹೇಳಿದರು.
ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿದರಷ್ಟೇ ಸಾಲದು ಅವರ ಚಟುವಟಿಕೆಗಳನ್ನು ನಿರಂತರವಾಗಿ ಗಮನಿಸುತ್ತಿರಬೇಕು. ಪೋಷಕರು ಮತ್ತು ಶಿಕ್ಷಕರು ಮಕ್ಕಳು ಹಾದಿ ತಪ್ಪಿದಾಗ ಅವರನ್ನು ತಿದ್ದಿತೀಡಿ ಸರಿದಾರಿಗೆ ತರುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಅಧ್ಯಕ್ಷ ಶಂಕರನಾರಾಯಣ ಭಟ್, ತಮ್ಮ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೆಳೆಸುವ ಕೆಲಸವನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ಪೋಷಕರು ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಬೋಧಕ ಬೋಧಕೇತರ ಸಿಬ್ಬಂದಿಗಳಿಗೆ ಸ್ಮರಣಿಕೆ ನೀಡಲಾಯಿತು.
ಪ್ರಾಂಶುಪಾಲೆ ಪೂಜಾ ಶಾಲೆಯ ವಾರ್ಷಿಕ ವರದಿಯನ್ನು ಮಂಡಿಸಿದರು. ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಶಾಲೆಯ ಕಾರ್ಯದರ್ಶಿ ಆನಂದ್‍ಕುಮಾರ್ ಶೆಟ್ಟಿ, ಖಜಾಂಚಿ ಉಜ್ವಲ್ ಡಿ ಪಡುಬಿದ್ರಿ ಟ್ರಸ್ಟಿಗಳಾದ ರಾಜಾರಾಮ್‍ಕೋಟೆ ಬಾಲಕೃಷ್ಣರಾವ್, ಶಿಕ್ಷಕರಾದ ನಮ್ರತಾ ಪೈ, ಸಿಂಚನ, ಮಮತಾ ಉಪಸ್ಥಿತರಿದ್ದರು.










