ಮಣಿಪುರ: ಗಡಿ ರಾಜ್ಯದಲ್ಲಿ ಉಗ್ರರು ಹೊಂಚು ಹಾಕಿ ನಡೆಸಿದ ದಾಳಿಗೆ ಅಸ್ಸಾಂ ರೈಫಲ್ಸ್ ನಖುಗಾ ಬೆಟಾಲಿಯನ್ ನ ಕಮಾಂಡಿಂಗ್ ಆಫೀಸರ್ ಕರ್ನಲ್ ವಿಪ್ಲವ್ ತ್ರಿಪಾಟಿ ಅವರ ಪತ್ನಿ ಮತ್ತು ಮಗ ಸೇರಿ ಏಳು ಮಂದಿ ಬಲಿಯಾಗಿರುವ ಘಟನೆ ಮಣಿಪುರದ ಸಿಂಘಾತ್ ನಲ್ಲಿ ನಡೆದಿದೆ.
ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್ ನ ಶಂಕಿತ ಉಗ್ರಗಾಮಿಗಳು ಚುರಾಚಂದ್ಪುರ ಜಿಲ್ಲೆಯ ಸೆಹ್ಕಾನ್ ಗ್ರಾಮದಲ್ಲಿ ತ್ರಿಪಾಠಿ ಅವರ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಗುಂಡಿನ ದಾಳಿಯಲ್ಲಿ ಕಮಾಂಡಿಂಗ್ ಅಧಿಕಾರಿ ಮತ್ತು ಮೂವರು ಯೋಧರು ಹುತಾತ್ಮರಾದರು. ಘಟನೆಯಲ್ಲಿ ಕಮಾಂಡಿಂಗ್ ಆಫೀಸರ್ ಹೆಂಡತಿ ಹಾಗೂ ಅವರ 6 ವರ್ಷದ ಮಗನನ್ನ ಸಹ ಹತ್ಯೆ ಮಾಡಲಾಗಿದೆ. ಗಾಯಗೊಂಡ ಇತರ ಸಿಬ್ಬಂದಿ ಬೆಹಿಯಾಂಗಾ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಉಗ್ರ ದಾಳಿಯನ್ನು ಮಣಿಪುರ ಮುಖ್ಯಮಂತ್ರಿ ಎನ್.ಬಿರನ್ ಸಿಂಗ್ ತೀವ್ರವಾಗಿ ಖಂಡಿಸಿದ್ದು, 46 ಅಸ್ಸಾಂ ರೈಫಲ್ಸ್ ಮೇಲೆ ಉಗ್ರರು ಹೇಡಿತನದಿಂದ, ಹೊಂಚು ಹಾಕಿ ದಾಳಿ ಮಾಡಿದ್ದು ಖಂಡನೀಯ. ಸಿಸಿಪುರ ಎಂಬಲ್ಲಿ ನಡೆದ ಈ ದಾಳಿಯಲ್ಲಿ ಕಮಾಂಡಿಂಗ್ ಅಧಿಕಾರಿ ಮತ್ತವರ ಕುಟುಂಬವೂ ಹತ್ಯೆಗೀಡಾಗಿದೆ. ಯೋಧರು ಹುತಾತ್ಮರಾಗಿದ್ದಾರೆ. ಉಗ್ರರನ್ನು ಸೆರೆಹಿಡಿಯಲು ರಾಜ್ಯದ ಭದ್ರತಾ ಪಡೆಗಳು ಮತ್ತು ಪ್ಯಾರಾಮಿಲಿಟರಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಖಂಡಿತ ಆಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.










