ಕೋಟ್ಯಂತರ ಮೌಲ್ಯದ ಚಿನ್ನಾಭರಣ ಕಳವು – ಮಗಳ ವಿರುದ್ಧವೇ ದೂರು ನೀಡಿದ ತಾಯಿ..!

57
firstsuddi

ಬೆಂಗಳೂರು : ಕೋಟ್ಯಂತರ ಮೌಲ್ಯದ ಚಿನ್ನಾಭರಣ ತೆಗೆದುಕೊಂಡು ಮಗಳು ನಾಪತ್ತೆಯಾಗಿದ್ದಾಳೆ ಎಂದು ಮಗಳ ವಿರುದ್ಧವೇ ತಾಯಿ ದೂರು ನೀಡಿರುವ ಘಟನೆಯೊಂದು ಜೆಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಜಯಲಕ್ಷ್ಮಿ ಎಂಬುವವರು ಮಗಳು ತೇಜವಂತಿ ವಿರುದ್ಧ ದೂರು ನೀಡಿದ್ದಾರೆ. ಕೆಲ ದಿನಗಳ ಹಿಂದೆ ವಿಜಯಲಕ್ಷ್ಮಿ ಅವರು ಆಪರೇಶನ್ ಗೆ ಒಳಗಾಗಿದ್ದರು. ಈ ವೇಳೆ ಮನೆಗೆ ಬಂದ ತೇಜವಂತಿ ತಾಯಿಗೆ ತಿಳಿಯದಂತೆ ಚಿನ್ನಾಭರಣ ತೆಗೆದುಕೊಂಡು ಹೋಗಿದ್ದಾಳೆ. ನಂತರ ಚಿನ್ನಾಭರಣವನ್ನು ಲಾಕರ್ ನಲ್ಲಿ ಇಟ್ಟಿರುವುದಾಗಿ ನಂಬಿಸಿದ್ದಾಳೆ. ಆದರೆ ಈಗ ಸುಮಾರು 4 ಕೋಟಿ ರೂ. ಮೌಲ್ಯದ 7.5 ಕೆಜಿ ವಜ್ರ ಹಾಗೂ ಚಿನ್ನಾಭರಣ ತೆಗೆದುಕೊಂಡು ಮಗಳು ನಾಪತ್ತೆಯಾಗಿದ್ದಾಳೆ ಎಂದು ವಿಜಯಲಕ್ಷ್ಮಿ ಜೆಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಸಂಬಂಧ ಸೆಕ್ಷನ್ 420ರ ಅಡಿ ಎಫ್ಐಆರ್ ದಾಖಲಾಗಿದೆ.