ಮಣಿಪುರದಲ್ಲಿ ಭೂಕುಸಿತ: ಸಾವಿನ ಸಂಖ್ಯೆ 14ಕ್ಕೆ ಏರಿಕೆ…

48
firstsuddi

ಮಣಿಪುರ : ಇಲ್ಲಿನ ನೋನಿ ಜಿಲ್ಲೆಯ ತುಪುಲ್ ರೈಲ್ವೆ ನಿಲ್ದಾಣದ ಬಳಿ ನಿನ್ನೆ ಭೂಕುಸಿತ ಉಂಟಾಗಿದ್ದು, ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಅವಶೇಷಗಳಡಿ ಸಿಲುಕಿದ್ದ 23 ಜನರನ್ನು ಹೊರತೆಗೆಯಲಾಗಿದೆ.

ಸೇನಾ ಸಿಬ್ಬಂದಿ, ರೈಲ್ವೆ ನೌಕರರು, ಗ್ರಾಮಸ್ಥರು ಮತ್ತು ಕಾರ್ಮಿಕರು ಸೇರಿದಂತೆ ಸುಮಾರು 60 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಕಾರ್ಯಾಚರಣೆಯ ನಂತರ 7 ಸೇನಾ ಸಿಬ್ಬಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 13 ಯೋಧರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಅಧಿಕಾರಿಗಳ ಪ್ರಕಾರ, ಹೆಚ್ಚಿನ ಸಂಖ್ಯೆಯ ಯೋಧರು ಇನ್ನೂ ನಾಪತ್ತೆಯಾಗಿದ್ದಾರೆ. ಹವಾಮಾನ ವೈಪರೀತ್ಯದಿಂದ ರಕ್ಷಣಾ ಕಾರ್ಯಾಚರಣೆಗೆ ಸಾಕಷ್ಟು ತೊಂದರೆಯಾಗುತ್ತಿದೆ. ಮಣಿಪುರದ ನೋನಿ ಜಿಲ್ಲೆಯಲ್ಲಿ ಇಂಫಾಲ್-ಜಿರಿಬಾಮ್ ರೈಲು ಮಾರ್ಗದ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇದಕ್ಕಾಗಿ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಮಣಿಪುರದಲ್ಲಿ ನಿರಂತರ ಮಳೆಯಿಂದಾಗಿ ಉಂಟಾದ ಭೂಕುಸಿತದ ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೆದಿದ್ದಾರೆ. ಹಾಗೇ ಕೇಂದ್ರ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ.