ಮದುವೆ ನಿಂತಿದ್ದಕ್ಕೆ ಮನನೊಂದು ವೈದ್ಯೆ ಆತ್ಮಹತ್ಯೆ..

48
firstsuddi

ತಿರುವನಂತಪುರಂ: ಮದುವೆ ನಿಂತಿದ್ದಕ್ಕೆ ಮನನೊಂದು ಕೇರಳದ ವೈದ್ಯೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಮೃತಳನ್ನು ಶಹನಾ (26) ಎಂದು ಗುರುತಿಸಲಾಗಿದೆ. ತಿರುವನಂತಪುರಂ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಪಿಜಿ ವಿದ್ಯಾರ್ಥಿನಿ ಶಹಾನಾ ಮಂಗಳವಾರ ಬೆಳಗ್ಗೆ ಸಂಸ್ಥೆಯ ಬಳಿಯ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸ್ನೇಹಿತ, ಮದುವೆಯ ಪ್ರಸ್ತಾಪದಿಂದ ಹಿಂದೆ ಸರಿದ ನಂತರ ಶಹನಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆಕೆಯ ಸಂಬಂಧಿಕರು ಆರೋಪಿಸಿದ್ದಾರೆ.

ಗೆಳೆಯನ ಕುಟುಂಬವು ಚಿನ್ನ, ಜಮೀನು ಹಾಗೂ ಬಿಎಂಡಬ್ಲ್ಯು ಕಾರಿನ ರೂಪದಲ್ಲಿ ವರದಕ್ಷಿಣೆ ನೀಡುವಂತೆ ಬೇಡಿಕೆ ಇಟ್ಟಿತ್ತು. ಆದರೆ ಈ ಬೇಡಿಕೆಗಳನ್ನು ಈಡೇರಿಸಲು ಶಹನಾ ಕುಟುಂಬಕ್ಕೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಪಿಜಿ ವೈದ್ಯರ ಸಂಘದ ಪ್ರತಿನಿಧಿಯೂ ಆಗಿದ್ದ ವೈದ್ಯ ಈಕೆಯ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಿದ್ದಾನೆ. ಇದರಿಂದ ಸಹನಾ ದಿಢೀರ್ ಖಿನ್ನತೆಗೆ ಒಳಗಾಗಿದ್ದರು.

ಘಟನೆ ಕುರಿತು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಿದ್ದಾರೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆಕೆಯ ಪ್ರಿಯಕರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆ ಕಾಯ್ದೆಯಡಿ ವರದಕ್ಷಿಣೆ ಬೇಡಿಕೆ, ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ಪ್ರಕರಣ ದಾಖಲಿಸಲಾಗಿದೆ.

ಘಟನೆ ಸಂಬಂಧ ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ಅಡ್ವೊಕೇಟ್ ಸತಿದೇವಿಯವರು ಶಹಾನಾ ಮನೆಗೆ ತೆರಳಿ ತಾಯಿಯನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ತಾಯಿ ಒತ್ತಾಯಿಸಿದ್ದಾರೆ.