ರಾಯ್ಪುರ: ಮದುವೆಯೊಂದರಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಛತ್ತೀಸ್‍ಗಢದ ರಾಜ್‍ನಂದಗಾಂವ್ ಜಿಲ್ಲೆಯ ಡೊಂಗರ್‌ಗಢದಲ್ಲಿ ನಡೆದಿದೆ.
ಬಲೋದ್ ಜಿಲ್ಲೆಯ ನಿವಾಸಿ ದಿಲೀಪ್ ರೌಜ್ಕರ್ ಮೃತ ವ್ಯಕ್ತಿ. ಈತ ಎಲೆಕ್ಟ್ರಿಕಲ್ ವಿಭಾಗದ ಉದ್ಯೋಗಿಯಾಗಿದ್ದ. ಮೇ 4 ಮತ್ತು 5 ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ದಿಲೀಪ್ ತನ್ನ ಸಂಬಂಧಿಯ ಮದುವೆಯಲ್ಲಿ ನೃತ್ಯ ಮಾಡುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಘಟನೆಯ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಡಿಯೋದಲ್ಲಿ, ದಿಲೀಪ್ ಮೊದಲು ವೇದಿಕೆಯೊಂದರಲ್ಲಿ ಇತರ ಕೆಲವರೊಂದಿಗೆ ಉತ್ಸಾಹಭರಿತವಾಗಿ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು, ತಕ್ಷಣ ಇದ್ದಕ್ಕಿದ್ದಂತೆ ನಿಲ್ಲಿಸಿ ವೇದಿಕೆಯ ಮೇಲೆ ಕುಳಿತುಕೊಳ್ಳುತ್ತಾನೆ. ಅದಾದ ಕೆಲವೇ ಕ್ಷಣಗಳಲ್ಲಿ ಆತ ಕುಸಿದು ಬಿಳುತ್ತಾನೆ.
ದಿಲೀಪ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಆತನನ್ನು ಆಸ್ಪತ್ರೆಗೆ ಕರೆತರುವ ಮೊದಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.










