ಮನೆ ಕೆಲಸದವಳ ಮೇಲೆ ಹಲ್ಲೆ – ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬಕ್ಕೆ ಪೊಲೀಸರಿಂದ ನೋಟಿಸ್…

71
firstsuddi

ಬೆಂಗಳೂರು : ಪಕ್ಕದ ಮನೆಯ ಮನೆಕೆಲಸದವಳ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನ ನಿರ್ಮಾಪಕ ಸೌಂದರ್ಯ ಜಗದೀಶ್, ಸೌಂದರ್ಯ ಜಗದೀಶ್ ಪತ್ನಿ ರೇಖಾ ಜಗದೀಶ್, ಮಗ ಸ್ನೇಹಿತ್ ಗೆ ವಿಚಾರಣೆಗೆ ಹಾಜರಾಗುವಂತೆ ಮಹಾಲಕ್ಷ್ಮೀ ಲೇಔಟ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪತ್ನಿ ಹಾಗೂ ಮಗ ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಕುಟುಂಬಸಮೇತ ನಾಪತ್ತೆಯಾಗಿದ್ದಾರೆ. ಹಲ್ಲೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ, ಹಲ್ಲೆಗೆ ಒಳಗಾದವರಿಂದ ಮಾಹಿತಿ ಪೊಲೀಸರು ಈಗಾಗಲೇ ಮಾಹಿತಿ ಪಡೆದಿದ್ದಾರೆ.

ಮನೆಕೆಲಸ ಮಾಡುವ ಮಹಿಳೆ ಅನುರಾಧ ನೀಡಿದ ದೂರಿನ ಮೇರೆಗೆ ರೇಖಾ ಜಗದೀಶ್, ಮಗ ಸ್ನೇಹಿತ್, ಮನೆಯ ಬೌನ್ಸರ್ ಗಳಾದ ನಿಖಿಲ್, ಕುಮಾರ್, ರೋಹಿತ್ ಹಾಗೂ ಅಶೋಕ್ ಸೇರಿದಂತೆ 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಸೌಂದರ್ಯ ಜಗದೀಶ್ ಮನೆಯ ಪಕ್ಕದ ಮನೆಯೊಂದರಲ್ಲಿ ಅನುರಾಧ, ಕಳೆದ ಎರಡು ವರ್ಷಗಳಿಂದ ಮನೆ ಕೆಲಸ ಮಾಡಿ ತಾಯಿಯೊಂದಿಗೆ ವಾಸ ಮಾಡುತ್ತಿದ್ದರು. ಶನಿವಾರ ಬೆಳಗ್ಗೆ ಕಸ ಗುಡಿಸುವ ವಿಚಾರಕ್ಕಾಗಿ ಸ್ನೇಹಿತ್ ಹಾಗೂ ಆತನ ಸ್ನೇಹಿತರು ಗಲಾಟೆ ತೆಗೆದಿದ್ದಾರೆ. ಕೆಲ ಹೊತ್ತಿನ ಬಳಿಕ ಸೌಂದರ್ಯ ಜಗದೀಶ್ ಹಾಗೂ ಬೌನ್ಸರ್ಗಳು ಮನೆ ಬಳಿ ಬಂದು ಮತ್ತೆ ಗಲಾಟೆ ತೆಗೆದಿದ್ದಾರೆ. ರೇಖಾ ಜಗದೀಶ್, ಇತರರು ತನ್ನ ಜೊತೆ ವಾಗ್ವಾದಕ್ಕೆ ಇಳಿದು, ವಿವಸ್ತ್ರಗೊಳಿಸಲು ಯತ್ನಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ತನ್ನ ತಾಯಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಅನುರಾಧ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನೊಂದು ಕಡೆ ಹಲ್ಲೆಗೆ ಒಳಗಾದ ಮಹಿಳೆಯ ಮನೆ ಮಾಲೀಕರಾದ ಮಂಜುಳ ಪುರುಷೋತ್ತಮ್ ಗೆ ಸ್ಟಾರ್ ನಟರೊಬ್ಬರು ಕರೆ ಮಾಡಿ ಗಲಾಟೆ ದೊಡ್ಡದು ಮಾಡದಂತೆ ತಿಳಿಸಿ ರಾಜೀ ಪಂಚಾಯತಿ ಮಾಡಲು ಯತ್ನಿಸಿದ್ದಾರೆ. ಘಟನೆ ನಡೆದು ಎರಡು ದಿನವಾದರೂ ಆರೋಪಿಗಳನ್ನು ಆರೋಪಿಗಳನ್ನು ಬಂಧಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿವೆ.