ಮನೆಗಳಿಗೆ ನುಗ್ಗಿ ಮನೆಯಲ್ಲಿದ್ದವರ ಕೈಕಾಲು ಕಟ್ಟಿಹಾಕಿ ದರೋಡೆ ನಡೆಸುತ್ತಿದ್ದ ಗ್ಯಾಂಗ್ ಅರೆಸ್ಟ್…

116
firstsuddi

ಆನೇಕಲ್: ಮನೆಗಳಿಗೆ ನುಗ್ಗಿ ಮನೆಯಲ್ಲಿದ್ದವರ ಕೈಕಾಲು ಕಟ್ಟಿಹಾಕಿ ದರೋಡೆ ನಡೆಸುತ್ತಿದ್ದ ಗ್ಯಾಂಗ್ ಅನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಎನ್. ಸತೀಶ್ ಕುಮಾರ್, ಮಣಿಕಂಠನ್, ಸತೀಶ್, ಅಯ್ಯನಾರ್, ಕಿರಣ್, ಸತೀಶ್ ಅಲಿಯಾಸ್ ಮಟನ್ ಸತೀಶ್ ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರು ತಮಿಳುನಾಡಿನ ಹೊಸೂರು ಮೂಲದವರಾಗಿದ್ದಾರೆ. ಬಂಧಿತರು ಹಲವಾರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಮನೆಯಲ್ಲಿ ಜನರಿದ್ದ ವೇಳೆಯೇ ತೆರಳಿ ಕೈಕಾಲು ಕಟ್ಟಿ ದರೋಡೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ-1
ಆನೇಕಲ್‍ನಲ್ಲಿ ಕೀರ್ತನಾ ಎಂಬ ಯುವತಿಯನ್ನು ಮನೆಯಲ್ಲಿ ಕಟ್ಟಿ ಹಾಕಿ ಚಿನ್ನಾಭರಣ ದೋಚಿ ಆರೋಪಿಗಳು ಪರಾರಿಯಾಗಿದ್ದರು.

ಪ್ರಕರಣ-2
ಕಳೆದ ನ.28ರಂದು ಅತ್ತಿಬೆಲೆಯ ಕುಮಾರ್ ಲೇಔಟ್‍ನ ಎಲ್ಐಸಿ ಏಜೆಂಟ್ ದೇವರಾಜೇಗೌಡ ಎಂಬವರ ಮನೆಯಲ್ಲಿ ದರೋಡೆ ಮಾಡಿದ್ದರು. ಅವರ ಮನೆಗೆ ಎಲ್ಐಸಿ ಪಾಲಿಸಿ ಮಾಡಿಸಬೇಕೆಂದು ಮೂರು ಬಾರಿ ಬಂದು ಹೋಗಿದ್ದರು. ಬಳಿಕ ಹೊಂಚು ಹಾಕಿ ಮಾರಕಾಸ್ತ್ರಗಳನ್ನ ತೋರಿಸಿ ಕೈಕಾಲು ಹಾಗೂ ಬಾಯಿಗೆ ಟೇಪ್ ಸುತ್ತಿ ಸುಮಾರು 12,50,000 ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನ ಕದ್ದು ಪರಾರಿಯಾಗಿದ್ದ. ಆರೋಪಿಗಳ ಪೈಕಿ ಮಣಿಕಂಠನ್ ಎಂಬಾತ ದೇವರಾಜೇಗೌಡರ ಮನೆಯ ಸಮೀಪವೇ ಬಾಡಿಗೆಗೆ ಇದ್ದನು. ಈತ ಮನೆಯಲ್ಲಿ ಇರುವವರ ಬಗ್ಗೆ ಹಾಗೂ ಹಣದ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದ. ಬಳಿಕ ಹೊಂಚು ಹಾಕಿ ಕಳ್ಳತನ ಎಸಗಿದ್ದರು.

ಪ್ರಕರಣ-3
ಹೊಸಕೋಟೆಯ ಅನುಗೊಂಡನಹಳ್ಳಿಯಲ್ಲಿ ಜನವರಿ 23ರಂದು ಮನೆಗಳ್ಳತನ ಪ್ರಕರಣ ನಡೆದಿತ್ತು. ನಾರಾಯಣಸ್ವಾಮಿ ಎಂಬುವವರ ಮನೆಗೆ ನುಗ್ಗಿದ ಆರೋಪಿಗಳು ಚಾಕು ತೋರಿಸಿ ಕಳ್ಳತನ ಮಾಡಿ ಪರಾರಿಯಾಗಿದ್ದರು.

ಸದ್ಯ ಆರೋಪಿಗಳನ್ನು ಬಂಧಿಸಿದ ಪೊಲೀಸರು, ಒಟ್ಟು ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ 11 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶ ಪಡೆಸಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಸಿಬ್ಬಂದಿ ಕಾರ್ಯವನ್ನು ಪ್ರಶಂಸಿಸಿದ್ದಾರೆ.