ಹೈದರಾಬಾದ್ : ಮನೆಗೆ ನುಗ್ಗಿದ ಸುಮಾರು 100 ಜನರು 24 ವರ್ಷದ ಯುವತಿಯನ್ನು ಅಪಹರಿಸಿರುವ ಘಟನೆ ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ವೈದ್ಯೆ ವೈಶಾಲಿ ಮನೆಗೆ ನುಗ್ಗಿದ್ದ ಗೂಂಡಾಗಳು ಮನೆಯನ್ನು ಧ್ವಂಸಗೊಳಿಸಿದ್ದಾರೆ. ಬಳಿಕ ಮನೆಯಲ್ಲಿದ್ದ ಆಕೆಯ ತಂದೆ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. ಅದಾದ ನಂತರ ಬಲವಂತವಾಗಿ ವೈಶಾಲಿಯನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾರೆ. ವೈಶಾಲಿಯ ಒಪ್ಪಿಗೆಯಿಲ್ಲದೇ ಅವಳನ್ನು ಎಳೆದುಕೊಂಡು ಕಾರಿನಲ್ಲಿ ಕೂರಿಸಿದರು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದರು.
ಏನಿದು ಪ್ರಕರಣ?
ಹೈದರಾಬಾದ್ ನ ಮುನ್ನೆಗುಡ ಪ್ರದೇಶದ ನಿವಾಸಿಯಾದ ಯುವತಿ 2021 ರಲ್ಲಿ ನವೀನ್ ರೆಡ್ಡಿ ಎಂಬಾತನ ಜೊತೆ ಪ್ರೀತಿ ಬೆಳೆಸಿಕೊಂಡಿದ್ದರು. ಬ್ಯಾಡ್ಮಿಂಟನ್ ತರಬೇತಿ ಕೇಂದ್ರದಲ್ಲಿ ಇಬ್ಬರ ಪರಿಚಯವಾಗಿತ್ತು. ಬಳಿಕ ಇಬ್ಬರೂ ಅನ್ಯೋನ್ಯವಾಗಿದ್ದರು. ಇದು ಎರಡು ಕುಟುಂಬಗಳಿಗೆ ಗೊತ್ತಾಗಿ ವಿವಾಹಕ್ಕೆ ಸಂಬಂಧಿಸಿದಂತೆ ಮನಸ್ತಾಪ ಉಂಟಾಗಿತ್ತು. ಕುಟುಂಬಸ್ಥರ ವಿರೋಧದಿಂದ ಯುವತಿ ನವೀನ್ ರೆಡ್ಡಿಯಿಂದ ದೂರವಾಗಿದ್ದಳು.
ಆದರೆ ಪ್ರೇಮಿ ನವೀನ್ ಆಕೆಯ ಮೊಬೈಲ್‍ಗೆ ಕರೆ, ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿ ಮದುವೆಗೆ ಒತ್ತಾಯಿಸುತ್ತಿದ್ದ, ಅಲ್ಲದೇ ಬೆದರಿಕೆ ಕೂಡ ಹಾಕಿದ್ದನಂತೆ. ಈ ಬಗ್ಗೆ ಯುವತಿ ಕುಟುಂಬಸ್ಥರು ಪೊಲೀಸರು ದೂರು ನೀಡಿದ್ದರು. ಪೊಲೀಸರು ನವೀನ್ ನನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದ.
ಇತ್ತ ಯುವತಿ ಕುಟುಂಬಸ್ಥರು ಬೇರೊಬ್ಬ ಯುವಕನ ಜೊತೆ ವಿವಾಹಕ್ಕೆ ಸಿದ್ಧತೆ ನಡೆಸಿದ್ದಾರೆ. ಪ್ರೀತಿಸಿದ ಹುಡುಗಿ ಬೇರೊಬ್ಬಳನ್ನು ವಿವಾಹವಾಗುವುದನ್ನು ತಡೆಯಲು ಪ್ರೇಮಿ ಸಹಚಚರ ಸಮೇತ ಮನೆಗೆ ನುಗ್ಗಿ ಹಲ್ಲೆ ಮಾಡಿ ಯುವತಿಯನ್ನು ಅಪಹರಿಸಿದ್ದಾನೆ. ಯುವತಿಯನ್ನು ಮನೆಯಿಂದ ಅಪಹರಿಸಿದ ಬಳಿಕ ದೂರು ನೀಡಿದ ಕುಟುಂಬಸ್ಥರು ಪತ್ತೆಗೆ ಮನವಿ ಮಾಡಿದ್ದಾರೆ. ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು 6 ತಾಸಿನಲ್ಲೇ ಪತ್ತೆ ಮಾಡಿದ್ದಾರೆ. ಪ್ರೇಮಿ ಮತ್ತು 8 ಜನರನ್ನು ಬಂಧಿಸಿದ ಪೊಲೀಸರು ಜೈಲಿಗಟ್ಟಿ ಯುವತಿಯನ್ನು ಪೋಷಕರಿಗೆ ಒಪ್ಪಿಸಿದ್ದಾರೆ.
ವಿಚಾರಣೆ ವೇಳೆ ನವೀನ್ ರೆಡ್ಡಿ, ಈಗಾಗಲೇ ವೈಶಾಲಿಯೊಂದಿಗೆ ಮದುವೆಯಾಗಿರುವುದಾಗಿ ತಿಳಿಸಿದ್ದಾನೆ. ನಾನು ನನ್ನ ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗಲು ಸಾಕಷ್ಟು ಪ್ರಯತ್ನಿಸಿದೆ. ಆಕೆ ಡೆಂಟಿಸ್ಟ್ ಆದ ಬಳಿಕ ಆಕೆಯ ಅಪ್ಪ-ಅಮ್ಮ ಅವಳ ಮನಸನ್ನು ಬದಲಾಯಿಸಿ, ನನ್ನಿಂದ ದೂರ ಮಾಡಿದ್ದಾರೆ. ಹೀಗಾಗಿ, ಅವರ ಮನೆಗೆ ನುಗ್ಗಿ ಆಕೆಯನ್ನು ಎಳೆದುಕೊಂಡು ಹೋಗಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಆರೋಪಿಗಳ ವಿರುದ್ಧ ಕೊಲೆ ಯತ್ನ ಮತ್ತು ಅಪಹರಣ ಸೇರಿದಂತೆ ಇತರೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.










