ಚಾಮರಾಜನಗರ: ಎಷ್ಟೇ ಕರೆದರೂ ತನ್ನ ಮನೆಗೆ ಬರಲು ಪತ್ನಿ ನಿರಾಕರಿಸಿದ್ದಕ್ಕೆ ಪತಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹೊನ್ನಹಳ್ಳಿಯಲ್ಲಿ ನಡೆದಿದೆ.
ವಸಂತಕುಮಾರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ವಸಂತ ಕುಮಾರ್ ಕೆಲಸ ಮಾಡುತ್ತಿದ್ದ ವೇಳೆ ಬೆಂಗಳೂರಿನ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರ ಕುಟುಂಬವೂ ಚೆನ್ನಾಗಿಯೇ ಇತ್ತು. ಆದರೆ, ವಸಂತ ಕುಮಾರ್ ಅವರು ಚಾಮರಾಜನಗರ ಜಿಲ್ಲೆಯ ಹೊನ್ನಹಳ್ಳಿ ಮೂಲದವರಾಗಿದ್ದು, ಅಲ್ಲಿ ಮನೆ ಹಾಗೂ ಜಮೀನು ಇದೆ. ಹೀಗಾಗಿ, ಬೆಂಗಳೂರಿನಲ್ಲಿ ಇದ್ದದ್ದು ಸಾಕು ಎಂದು ತಮ್ಮ ಹಳ್ಳಿಗೆ ಹೋಗಿದ್ದಾರೆ. ನಂತರ, ಹೆಂಡತಿಯನ್ನೂ ಕರೆದುಕೊಂಡು ಹೋಗಿದ್ದು, ಅಲ್ಲಿ ಇರಲಾಗದೇ ಹೆಂಡತಿ ಬೆಂಗಳೂರಿಗೆ ವಾಪಸ್ ಬಂದಿದ್ದಾಳೆ. ಪದೇ ಪದೇ ಕರೆದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಡೆತ್ ನೋಟ್ ಬರೆದಿಟ್ಟು ವಸಂತ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










