ಮರಿಯಮ್ಮನಹಳ್ಳಿ: ಸಾಹಿತ್ಯ, ಸಂಗೀತ, ಕಲೆ, ಸಂಸ್ಕøತಿ ರಂಗ ಭೂಮಿ ಇವೆಲ್ಲದರ ಜೊತೆಗೆ ನಾಡಿನ ಹಿರಿಮೆ ಹೆಚ್ಚಿಸುವಲ್ಲಿ ಮಾತಾ ಮಂಜಮ್ಮ ಜೋಗ್ತಿಯವರ ಕಾರ್ಯ ಶ್ಲಾಘನೀಯ ಎಂದು ಬಿ.ಎಂ.ಎಂ. ಇಸ್ಪಾತ್ ಕಂಪನಿಯ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಗಣೇಶ್ ಹೆಗಡೆ ಅಭಿಪ್ರಾಯಪಟ್ಟರು.
ಅವರು ಸೋಮವಾರ ಬಿ.ಎಂ.ಎಂ. ಕಂಪನಿಯಲ್ಲಿ ಏರ್ಪಡಿಸಿದ್ದ ಕೇಂದ್ರ ಸರ್ಕಾರ ಕೊಡಮಾಡುವ ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಮಾತಾ ಮಂಜಮ್ಮ ಜೋಗ್ತಿಯವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ನಾಡಿನಲ್ಲಿ ಸಾಧು ಸಂತರು, ಋಷಿಮುನಿಗಳು, ತತ್ವಜ್ಞಾನಿಗಳು, ದಾರ್ಶನಿಕರು, ಸಮಾಜ ಸುಧಾರಕರು, ಕವಿಗಳು-ಸಾಹಿತಿಗಳು, ಕಲಾವಿದರು ಬಾಳಿ, ನಾಡಿನ ಹಿರಿಮೆ-ಗರಿಮೆ ಹೆಚ್ಚಿಸುವಲ್ಲಿ ತಮ್ಮದೇ ಪಾತ್ರವಹಿಸಿದ್ದಾರೆ. ಅಲ್ಲದೇ ನಾಡಿನ ಹಿರಿಮೆ-ಗರಿಮೆಗೆ ತಮ್ಮ ಜೀವನವನ್ನೂ ಮುಡುಪಾಗಿಟ್ಟಿದ್ದಾರೆ. ಅಂತಹ ವಿಶೇಷ ವ್ಯಕ್ತಿಗಳ ಸಾಲಿನಲ್ಲಿ ಮಾತಾ ಮಂಜಮ್ಮ ಜೋಗ್ತಿಯೂ ಒಬ್ಬರು. ಇವರ ಕಲಾ ಪ್ರತಿಭೆ ರಾಷ್ಟ್ರಾದ್ಯಂತ ಪ್ರಸಿದ್ದಿ ಪಡೆದಿದೆ ಜೊತೆಗೆ ಇತರೆ ಕಲಾವಿದರಿಗೆ ಮಾದರಿಯಾಗಿದೆ ಎಂದರು.
ಕಲೆಯ ತವರೂರು ಎಂದೇ ಪ್ರಸಿದ್ಧಿಯಾದ ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿಗೆ ಕೇಂದ್ರ ಸರ್ಕಾರ ಕೊಡಮಾಡುವ ಪ್ರತಿಷ್ಟಿತ ಪ್ರಶಸ್ತಿಗಳೊಂದಾದ ಪದ್ಮಶ್ರೀ ಪ್ರಶಸ್ತಿ ತಂದುಕೊಟ್ಟ ಹಿರಿಮೆ ಜಾನಪದ ಕಲಾವಿದೆ ಮಾತಾ ಮಂಜಮ್ಮ ಜೋಗ್ತಿಯವರಿಗೆ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು. ಕೇಂದ್ರ ಸರಕಾರವೂ ತೃತಿಯಲಿಂಗಿ ಮಾತಾ ಮಂಜಮ್ಮ ಜೋಗ್ತಿಯವರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವ ಮೂಲಕ ಒಂದು ವಿಶಿಷ್ಟ ಕಲಾ ಪ್ರಕಾರಕ್ಕೆ ಮನ್ನಣೆ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾತಾ ಮಂಜಮ್ಮ ಜೋಗ್ತಿ, ಕಲೆಯು ಕಲಾವಿದರ ವೈಚಾರಿಕ ಮತ್ತು ಬೌಧ್ಧಿಕ ನಿಲುವಿನ ಜೊತೆಗೆ ಮೌಲಿಕ ವ್ಯಕ್ತಿಗಳನ್ನು ಮಾನ್ಯಮಾಡುವ ಅಗಾಧ ಶಕ್ತಿಯನ್ನು ಹೊಂದಿದೆ. ಕಲೆ ಯಾರ ಸೊತ್ತು ಅಲ್ಲ. ಅದು ಜಾತಿ, ಮತ, ಧರ್ಮಗಳ ಗಡಿದಾಟಿ ಸರ್ವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಾಧನವಾಗಿದೆ. ನನಗೆ ಸಿಕ್ಕಂತಹ ಈ ಪ್ರಶಸ್ತಿ ನನ್ನ ವಿಶಿಷ್ಟ ಸಮುದಾಯಕ್ಕೆ ಸಂದ ಗೌರವವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಂಪನಿಯ ವಾಣಿಜ್ಯ ವಿಭಾಗದ ಹಿರಿಯ ಉಪಾಧ್ಯಕ್ಷ ಮನೋಜ್ ಕುಮಾರ್ ಅಗರ್ ವಾಲ್, ಪಟ್ಟಣ ಆರಕ್ಷಕ ಠಾಣೆಯ ಉಪನಿರೀಕ್ಷಕ ಶಿವಕುಮಾರ್, ಸಮಾಜ ಸೇವಕ ಪ್ರಕಾಶ್ ಪ್ರಜಾರ್ ಮತ್ತು ಕೃಷ್ಣನಾಯಕ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಮಾತಾ ಮಂಜಮ್ಮ ಜೋಗ್ತಿಯವರಿಗೆ ಕಂಪನಿಯಿಂದ ವಿಶೇಷ ಸನ್ಮಾನ ನಡೆಯಿತು.
ಈ ಸಂದರ್ಭದಲ್ಲಿ ಬಿ.ಎಂ.ಎಂ. ಕಂಪನಿಯ ವಿವಿಧ ವಿಭಾಗಗಳ ಮುಖ್ಯಸ್ಥರು, ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.










