ಕೋಲಾರ: ಮದುವೆಯಾದ ಮೇಲೆ ಗಂಡನೊಂದಿಗೆ ಸಂಸಾರ ಮಾಡಲೊಪ್ಪದ ಮಗಳನ್ನು ವ್ಯಕ್ತಿಯೊಬ್ಬ ಬೆಂಕಿ ಹಚ್ಚಿ ಸುಟ್ಟುಹಾಕಿರುವ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕು ಮುಸ್ಟೂರು ಗ್ರಾಮದಲ್ಲಿ ನಡೆದಿದೆ.
ಅರ್ಚಿತಾ (17) ಕೊಲೆಯಾದ ಯುವತಿ. ರವಿ ಕೊಲೆ ಮಾಡಿದ ಆರೋಪಿ. ಆರೋಪಿ ರವಿ, ತನ್ನ ಮಗಳು ಅರ್ಚಿತಾಳನ್ನು ಕೊಲೆ ಮಾಡಿದ ನಂತರ ಮಗಳು ಕಾಣೆಯಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ್ದ. ದೂರಿನ ಮೇರೆಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ ಮರ್ಯಾದಾ ಹತ್ಯೆ ಬೆಳಕಿಗೆ ಬಂದಿದೆ.
ಅರ್ಚಿತಾ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ತಂದೆ, ಬೇರೊಬ್ಬ ವ್ಯಕ್ತಿಯ ಜತೆ ಮದುವೆ ಮಾಡಿದ್ದನು. ನೀನು ಪ್ರೀತಿಸುವ ಹುಡುಗ ಸಂಬಂಧದಲ್ಲಿ ಅಣ್ಣ ಆಗುತ್ತಾನೆ ಬೇಡ ಎಂದು ಮಗಳಿಗೆ ಬುದ್ಧಿ ಹೇಳಿದ್ದರು. ಆದರೂ, ಅವನೊಂದಿಗೆ ಸಂಬಂಧ ಮುಂದುವರೆಸುತ್ತಿದ್ದಳು. ಮಗಳು ಅಪ್ರಾಪ್ತೆ ಆಗಿದ್ರು ಸಹ ಬೇರೊಬ್ಬನ ಜೊತೆಗೆ ಮಾರ್ಚ್ ತಿಂಗಳಲ್ಲಿ ಮದುವೆ ಮಾಡಿದ್ದರು. ಮದುವೆ ಬಳಿಕವೂ ಆಕೆ ಸರಿಯಾಗಿ ಗಂಡನೊಂದಿಗೆ ಸಂಸಾರ ಮಾಡದೇ ಕ್ಯಾತೆ ತೆಗೆದಿದ್ದಾಳೆ. ಇದರಿಂದಾಗಿ ಅಳಿಯ ಬಂದು ಮಗಳ ಬಗ್ಗೆ ತಂದೆ ರವಿಯ ಬಳಿ ದೂರನ್ನು ಹೇಳಿದ್ದಾನೆ. ಆಗ, ತಂದೆ ಮಗಳಿಗೆ ಬುದ್ದಿ ಹೇಳುತ್ತೇನೆ ಎಂದು ತವರು ಮನೆಗೆ ಕರೆದುಕೊಂಡು ಬಂದಿದ್ದಾನೆ.
ಇನ್ನು ತವರು ಮನೆಗೆ ಕರೆದುಕೊಂಡು ಬಂದು ಬುದ್ಧಿ ಹೇಳಿದರೂ ನನಗೆ ಪ್ರೀತಿಸಿದವನೆ ಬೇಕು ಎಂದು ಮಗಳು ಪಟ್ಟು ಹಿಡಿದಿದ್ದಾಳೆ. ಇದಕ್ಕೆ ಕೋಪಗೊಂಡ ತಂದೆ ರವಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಕೊಲೆಯ ಬಳಿಕ ಬೇರೊಬ್ಬರ ಜಮೀನಿನಲ್ಲಿ ಮಗಳನ್ನು ಸುಟ್ಟು ಹಾಕಿದ್ದಾನೆ. ಆದರೆ, ಗ್ರಾಮದ ಕೆಲವರಿಗೆ ಹೆದರಿ ಮಗಳು ಕಾಣೆ ಆಗಿದ್ದಾಳೆಂದು ತಂದೆ ರವಿ ಅಕ್ಟೋಬರ್ 17ರಂದು ನಂಗಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ ತಂದೆ ರವಿಯೇ ಅರ್ಚಿತಾಳನ್ನು ಕೊಂದು ಬಳಿಕ ಸುಟ್ಟುಹಾಕಿರುವುದು ಬಯಲಾಗಿದೆ. ಸದ್ಯ ನಂಗಲಿ ಪೊಲೀಸರು ಆರೋಪಿ ರವಿಯನ್ನು ಬಂಧಿಸಿದ್ದಾರೆ. ಮತ್ತೊಂದೆಡೆ ಎಫ್ಎಸ್ಎಲ್ ತಂಡ ಮುಸ್ಟೂರು ಗ್ರಾಮದಲ್ಲಿ ಕೊಲೆಯಾದ ಸ್ಥಳದಲ್ಲಿ ಮೃತಳ ಅವಶೇಷಗಳಿಗಾಗಿ ಹುಡುಕಾಟ ನಡೆಸಿದೆ.










