ಕೋಲಾರ : ಮಗು ಅಪಹರಣ ಪ್ರಕರಣದಲ್ಲಿ ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದರಿಂದ ಮರ್ಯಾದೆಗೆ ಅಂಜಿ ಭಾನುವಾರ ಆತ್ಮಹತ್ಯೆಗೆ ಯತ್ನಿಸಿದ್ದ ಒಂದೇ ಕುಟುಂಬದ ಐವರು ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾರೆ. ಮುನಿಯಪ್ಪ (70) ಪತ್ನಿ ನಾರಾಯಣಮ್ಮ (65), ಅಳಿಯ ಬಾಬು (45) ಮಗಳು ಪುಷ್ಪ (33) ಹಾಗೂ ಮೊಮ್ಮಗಳು ಗಂಗೋತ್ರಿ (17) ಮೃತರು.
ಏನಿದು ಮಗು ಅಪಹರಣ ಪ್ರಕರಣ?
ಕೋಲಾರ ತಾಲೂಕಿನ ಹೊನ್ನೇನಹಳ್ಳಿಯ ಸತ್ಯ ಹಾಗೂ ಸುಮಿತ್ರ ಎಂಬುವರು ಪ್ರೀತಿಸಿ ಮನೆಯವರಿಗೆ ತಿಳಿಸದೆ ಮದುವೆಯಾಗಿದ್ದರು. ಅವರಿಗೆ ಒಂದು ಹೆಣ್ಣು ಮಗು ಜನಿಸಿತ್ತು. ಮಗುವನ್ನು ತಮ್ಮ ಪರಿಚಯಸ್ಥರಾದ ಕಾರಂಜಿಕಟ್ಟೆ ನಿವಾಸಿ ಗೀತಾ ಎನ್ನುವವರಿಗೆ ಅಕ್ಟೋಬರ್18 ರಂದು ಮಗುವನ್ನು ಕೊಟ್ಟು ಊರಿಗೆ ಹೋಗಿದ್ದರು. ಈ ವೇಳೆ ಗೀತಾರ ಜೊತೆಯಲ್ಲಿ ಪುಷ್ಪಾ ಎಂಬುವವರು ಹೋಗಿದ್ದರು. ಊರಿಂದ ಬಂದ ಯುವತಿಗೆ ತಮಗೆ ಯಾವುದೇ ಮಗುವನ್ನು ಕೊಟ್ಟಿಲ್ಲ ಎಂದಿದ್ದರು. ಇದರಿಂದ ಅಸಮಾಧಾನಗೊಂಡ ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಗು ಅಪಹರಣ ಪ್ರಕರಣ ದಾಖಲಿಸಿದ್ದರು. ಮಗು ಅಪಹರಣ ಪ್ರಕರಣದ ದೂರಿನಲ್ಲಿ ಪುಷ್ಪಾರ ಹೆಸರು ದಾಖಲಾಗಿತ್ತು.
ಈ ಕಾರಣಕ್ಕೆ ಪೊಲೀಸರು ಪುಷ್ಪಾರನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದು ವಿಚಾರಣೆ ನಡೆಸಿದ್ದರು. ಅಲ್ಲದೆ ಮಗುವನ್ನು ತಂದು ಕೊಡುವಂತೆ ತಾಕೀತು ಮಾಡಿದ್ದರು. ಇದರಿಂದ ಕುಟುಂಬದ ಮರ್ಯಾದೆ ಹೋಗುತ್ತದೆ ಎಂದು ಹೆದರಿದ ಐವರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಬಳಿಕ ಅವರನ್ನು ಆರ್ ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಐದು ಮಂದಿಯೂ ಮೃತಪಟ್ಟಿದ್ದಾರೆ.










