ಪಣಜಿ: ಮಹದಾಯಿಗಾಗಿ ಯಾವುದೇ ಮಾರ್ಗದಲ್ಲಿಯಾದರೂ ಹೋರಾಡಲು ನಾವು ಸಿದ್ಧ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೂ ಏನೇ ಹೇಳಿದರೂ ನಾವು ನಿರ್ಧರಿಸಿ ಆಗಿದೆ. ಮಹಾದಾಯಿಗಾಗಿ ನಾವು ಏನು ಮಾಡುತ್ತಿದ್ದೇವೋ ಅದನ್ನು ಕಾನೂನು ಬದ್ಧವಾಗಿ, ತಾಂತ್ರಿಕವಾಗಿ ಮತ್ತು ರಾಜಕೀಯದ ಮೂಲಕ ಮಾಡುತ್ತಿದ್ದೇವೆ. ಈ ಹೋರಾಟ ಗೆಲ್ಲಲು ಏನು ಬೇಕೋ ಅದನ್ನು ಮುಂದುವರೆಸಿದ್ದೇವೆ ಎಂದು ಸಾವಂತ್ ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮಹದಾಯಿ ಯೋಜನೆ ಕುರಿತು ಹೇಳಿಕೆ ನೀಡಿದ್ದ ಸಿಎಂ ಬೊಮ್ಮಾಯಿ ಅವರು, ಕಳಸಾ ಬಂಡೂರಿ ವಿಷಯದಲ್ಲಿ ಗೋವಾ ಸರ್ಕಾರ ತೆಗೆದುಕೊಂಡಿರುವ ನಿರ್ಣಯಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮಹದಾಯಿ ನ್ಯಾಯಾಧೀಕರಣ ರಚನೆಯಾಗಿದೆ. 10 ವರ್ಷ ನ್ಯಾಯಾಧೀಕರಣದ ವಿಚಾರಣೆ ನಡೆದು ಆದೇಶ ಬಂದಿದೆ. ನ್ಯಾಯಾಧೀಕರಣದ ಆದೇಶ ಎಂದರೆ ಅದು ಸರ್ವೋಚ್ಚ ನ್ಯಾಯಾಲಯದ ತೀರ್ಪು ಇದ್ದಂತೆ. ಈ ಆದೇಶದ ಆಧಾರದ ಮೇಲೆ ನಾವು ಡಿಪಿಅರ್ ಮಾಡಿದ್ದೇವೆ. ಕಾನೂನು ಬದ್ಧವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದರು.
ಏನಿದು ವಿವಾದ : ಕಳಸಾ ಬಂಡೂರಿ ನಾಲಾ ಯೋಜನೆಯು ಬೆಳಗಾವಿ, ಧಾರವಾಡ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ಮಹಾದಾಯಿಯಿಂದ ನೀರನ್ನು ತಿರುಗಿಸುವ ಗುರಿಯನ್ನು ಹೊಂದಿದೆ. 1980ರ ದಶಕದಲ್ಲಿ ಪ್ರಸ್ತಾಪಿಸಲಾದ ಈ ಯೋಜನೆ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ನಡುವಿನ ವಿವಾದಕ್ಕೆ ಕಾರಣವಾಗಿದೆ.










