ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಆರೋಪಿ ತಂದೆಯ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆ…

46
firstsuddi

ರಾಯ್ಪುರ: ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯ ತಂದೆ ನಿನ್ನೆ ಛತ್ತೀಸ್‍ಗಢದ ದುರ್ಗ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತರನ್ನು ಸುಶೀಲ್ ದಾಸ್ (62) ಎಂದು ಗುರುತಿಸಲಾಗಿದೆ. ಮೃತರು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವ ಪ್ರಕರಣದಲ್ಲಿ ನಗದು ಕೊರಿಯರ್ ಆಗಿದ್ದ ಆಸಿಮ್ ದಾಸ್ ತಂದೆ.

ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಸುಶೀಲ್ ದಾಸ್ ಭಾನುವಾರ ಸಂಜೆಯಿಂದ ನಾಪತ್ತೆಯಾಗಿದ್ದರು. ಇದೀಗ ಅವರ ಶವ ಅಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ಅಚ್ಚೋಟಿ ಗ್ರಾಮದ ಬಾವಿಯಲ್ಲಿ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಇದು ಆತ್ಮಹತ್ಯೆ ಎಂದು ತೋರುತ್ತದೆ. ಆದರೆ ಸಾವಿನ ಹಿಂದಿನ ನಿಖರ ಕಾರಣ ಏನೆಂದು ತನಿಖೆಯ ಬಳಿಕವಷ್ಟೇ ತಿಳಿಯಬೇಕಿದೆ. ದಾಸ್, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ದುರ್ಗದ ಹಿರಿಯ ಪೊಲೀಸ್ ಅಧೀಕ್ಷಕ ರಾಮ್ ಗೋಪಾಲ್ ಗಾರ್ಗ್ ತಿಳಿಸಿದ್ದಾರೆ.

ನವೆಂಬರ್ 2ರಂದು ಮೃತ ಸುಶೀಲ್ ದಾಸ್ ಪುತ್ರ ಆಸಿಮ್ ದಾಸ್ ನಿವಾಸದ ಹೌಸಿಂಗ್ ಬೋರ್ಡ್ ಹೌಸ್ ನಂ.15ರ ಮೇಲೆ ಇಡಿ ತಂಡ ದಾಳಿ ನಡೆಸಿತ್ತು. 5 ಕೋಟಿಗೂ ಅಧಿಕ ಮೊತ್ತವನ್ನು ವಸೂಲಿ ಮಾಡಲಾಗಿದೆ. ಇದಾದ ಬಳಿಕ ಇಡಿ ತಂಡ ಆಸಿಮ್‌ನನ್ನು ಬಂಧಿಸಿತ್ತು. ನಂತರ ನ್ಯಾಯಾಲಯ ಅವರನ್ನು ಜೈಲಿಗೆ ಕಳುಹಿಸಿತು. ಮಗನ ಬಂಧನದ ನಂತರ ಮನನೊಂದು ನಿತ್ಯ ಮದ್ಯ ಸೇವಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಈ ಸಂಬಂಧ ಅಂಡಾ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.