ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ಘೋಷಿಸಿದ್ದಾರೆ. ಸಿಎಂ ಸ್ಥಾನದ ಜೊತೆಗೆ ಎಂಎಲ್ ಸಿ ಸ್ಥಾನಕ್ಕೂ ಉದ್ಧವ್ ರಾಜೀನಾಮೆ ಘೋಷಿಸಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿದ್ದ ಮಹಾವಿಕಾಸ್ ಅಘಾಡಿ ಮೈತ್ರಿ ಸರ್ಕಾರ 2 ವರ್ಷ 7 ತಿಂಗಳಲ್ಲೇ ಪತನಗೊಂಡಿದೆ. ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದು, ಮುಖ್ಯಮಂತ್ರಿಗಳ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ವಿಶ್ವಾಸಮತಯಾಚನೆ ಮಾಡಲು ಸುಪ್ರೀಂಕೋರ್ಟ್ ಸೂಚನೆ ನೀಡುತ್ತಿದ್ದಂತೆ ಫೇಸ್ ಬುಕ್ ನಲ್ಲಿ ಲೈವ್ ಗೆ ಬಂದು ಮಾತನಾಡಿದ ಉದ್ಧವ್ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹ ಎಂದಿದ್ದಾರೆ. ಇದೇ ವೇಳೆ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ತಿಳಿಸಿದರು.
ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಅನಿರೀಕ್ಷಿತವಾಗಿ ಬಂದಿದ್ದೇನೆ. ಅದೇ ರೀತಿ ಇದೀಗ ನಿರ್ಗಮಿಸುತ್ತಿದ್ದೇನೆ. ಮುಖ್ಯಮಂತ್ರಿ ಸ್ಥಾನಕ್ಕೆ ಅಟ್ಟಿಕೊಂಡು ಕುಳಿತುಕೊಳ್ಳುವ ವ್ಯಕ್ತಿ ನಾನಲ್ಲ. ಹಾಗೆಂದು ಶಾಶ್ವತವಾಗಿ ಇಲ್ಲಿಂದ ತೆರಳುವುದಿಲ್ಲ. ಮತ್ತೊಂದು ಶಿವಸೇನೆ ಭವನದಲ್ಲಿ ಕುಳಿತುಕೊಳ್ಳಲಿದ್ದೇನೆ ಎಂದಿದ್ದಾರೆ.
ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ನನ್ನನು ಬೆಂಬಲಿಸಿದ್ದಕ್ಕಾಗಿ ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸಿರುವ ಉದ್ಧವ್ ಠಾಕ್ರೆ, ಆಡಳಿತಾವಧಿಯಲ್ಲಿ ಎಲ್ಲ ರೀತಿಯ ಸಹಕಾರ ನೀಡಿದ್ದಕ್ಕಾಗಿ ಮಿತ್ರಪಕ್ಷಗಳಾದ ಎನ್ ಸಿಪಿ ಮತ್ತು ಕಾಂಗ್ರೆಸ್ ಗೆ ಕೃತಜ್ಞತೆ ಸಲ್ಲಿಸಿದ್ದಾರೆ.










