ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚಳ – ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ…

59
firstsuddi

ಮುಂಬೈ : ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾದ ಹಿನ್ನಲೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ರೈಲುಗಳು, ಬಸ್ ಗಳು, ಚಿತ್ರಮಂದಿರಗಳು, ಸಭಾಂಗಣಗಳು, ಕಚೇರಿಗಳು, ಆಸ್ಪತ್ರೆಗಳು, ಕಾಲೇಜುಗಳು, ಶಾಲೆಗಳಂತಹ ಮುಚ್ಚಿದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಪ್ರದೀಪ್ ವ್ಯಾಸ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಕಳೆದ ಎರಡು ವಾರಕ್ಕೆ ಹೋಲಿಸಿದರೆ ಕಳೆದೊಂದು ವಾರದಿಂದ 9 ಜಿಲ್ಲೆಗಳಲ್ಲಿ ಸೋಂಕು ಹೆಚ್ಚುತ್ತಿರುವ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗೆ ಬಿಎ.4 ಮತ್ತು ಬಿಎ.5 ಉಪವಿಭಾಗಗಳನ್ನು ಹೊಂದಿರುವ ರೋಗಿಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ ಹಿನ್ನೆಲೆ ನಾವು ಈ ಹಂತದಲ್ಲಿ ಎಚ್ಚರಿಕೆ ವಹಿಸುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ಮಹಾರಾಷ್ಟ್ರದಲ್ಲಿ ನಿನ್ನೆ 1,134 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 763 ಪ್ರಕರಣಗಳು ಮುಂಬೈನಿಂದಲೇ ವರದಿಯಾಗಿದೆ. ಕೊರೊನಾ ವೈರಸ್ ಪ್ರಕರಣಗಳಲ್ಲಿ ಸ್ಥಿರವಾದ ಏರಿಕೆಯ ಮಧ್ಯೆ, ಮುಂಬೈ ಮುನ್ಸಿಪಲ್ ಕಮಿಷನರ್ ಇಕ್ಬಾಲ್ ಚಹಾಲ್ ಅವರು ಇತ್ತೀಚೆಗೆ ಸೋಂಕುಗಳು ಕಂಡುಬಂದಿರುವ ವಸತಿ ಕಟ್ಟಡಗಳಲ್ಲಿ ಸಾಮೂಹಿಕ ಪರೀಕ್ಷೆಯನ್ನು ನಡೆಸುವಂತೆ ನಾಗರಿಕ ಅಧಿಕಾರಿಗಳಿಗೆ ಸೂಚಿಸಿದ್ದಾರೆ.