ಮಹಿಳಾ ಟಿ-20 ವಿಶ್ವಕಪ್- ಕಿವೀಸ್ ವಿರುದ್ಧ ಜಯಗಳಿಸಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟ ಭಾರತ…

197
firstsuddi

ಆಸ್ಟ್ರೇಲಿಯಾ : ಮೆಲ್ಬೋರ್ನ್ ನ ಜಂಕ್ಷನ್ ಓವಲ್ ಕ್ರೀಡಾಂಗಣದಲ್ಲಿ ಇಂದು ನಡೆದ ಭಾರತ ಹಾಗೂ ಕಿವೀಸ್ ವಿರುದ್ಧದ ಮಹಿಳಾ ವಿಶ್ವಕಪ್ ಟಿ-20 ಮೂರನೇ ಪಂದ್ಯದಲ್ಲಿ ಭಾರತೀಯ ತಂಡ ಕಿವೀಸ್ ವಿರುದ್ಧ 4 ರನ್‍ಗಳಿಂದ ಜಯಗಳಿಸಿ ಸೆಮಿಫೈನಲ್ ಹಂತಕ್ಕೆ ತಲುಪಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತು. 134 ರನ್‍ಗಳ ಸಾಮಾನ್ಯ ಗುರಿಯನ್ನು ಬೆನ್ನತ್ತಿದ ಕಿವೀಸ್‍ಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. 34 ರನ್ ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್‍ಗಳನ್ನು ಕಳೆದುಕೊಂಡಿತು. ಬಳಿಕ ಬ್ಯಾಟಿಂಗ್ ಮಾಡಿದ ಮ್ಯಾಡಿ ಗ್ರೀನ್(24), ಕೇಟಿ ಮಾರ್ಟಿನ್(25) ರನ್ ಗಳಿಸಿ ಇಬ್ಬರು ಆಟಗಾರ್ತಿಯರು ರಾಜೇಶ್ವರಿ ಗಾಯಕ್ವಾಡ್ ಅವರಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಕೊನೆ ಕ್ಷಣದಲ್ಲಿ ಅಮೆಲಿಯಾ ಕೆರ್(34) 19ನೇ ಓವರ್‍ನಲ್ಲಿ 18 ರನ್ ಗಳಿಸುವ ಮೂಲಕ ಕಿವೀಸ್ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಆದರೆ ಕಿವೀಸ್ ತಂಡ 20ನೇ ಓವರ್ ನಷ್ಟಕ್ಕೆ 130 ರನ್‍ಗಳಿಸುವಲ್ಲಿ ಮಾತ್ರ ಶಕ್ತವಾಯಿತು.
ಭಾರತದ ಪರವಾಗಿ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಅವರು 34 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸುವ ಮೂಲಕ 46 ರ್ ಗಳಿಸಿದರು. ಬಳಿಕ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ತಾನಿಯಾ ಭಾಟಿಯಾ ಅವರು 23 ರನ್ ಗಳಿಸಿದರು. ಈ ಇಬ್ಬರೂ ಆಟಗಾರ್ತಿಯರನ್ನು ಬಿಟ್ಟರೆ ಇನ್ನುಳಿದ ಆಟಗಾರ್ತಿಯರು ನಿರೀಕ್ಷೆಯಂತೆ ಆಡದೇ ಇದ್ದುದರಿಂದ ಭಾರತ 20 ಓವರ್ ನಷ್ಟಕ್ಕೆ 133 ರನ್ ಗಳಿಸಿತು. ಭಾರತದ ಪರ 46 ರನ್ ಗಳಿಸಿದ ಶಫಾಲಿ ವರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.