ಬೆಂಗಳೂರು : ಐವರು ವಿದೇಶಿ ಮಹಿಳೆಯರು ಸಾಂತ್ವನ ಕೇಂದ್ರದಿಂದ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದಾರೆ.
ವೀಸಾ, ಪಾಸ್ ಪೋರ್ಟ್ ಅವಧಿ ಮುಗಿದರೂ ಈ ವಿದೇಶಿಯರು ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದರು. ಈ ಸಂಬಂಧ ಹೆಣ್ಣೂರು ಸೇರಿದಂತೆ ಪೂರ್ವ ವಿಭಾಗದ ಪೊಲೀಸರು 13 ಮಂದಿ ವಿದೇಶಿ ಮಹಿಳೆಯರನ್ನು ಬಂಧಿಸಿದ್ದರು. ಬಳಿಕ ಸಿದ್ದಾಪುರ ಬಳಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಬಂಧಿತರನ್ನು ಇರಿಸಲಾಗಿತ್ತು. ಆದ್ರೆ ಕಳೆದ ರಾತ್ರಿ ಐವರು ಸಿಬ್ಬಂದಿ ಕಣ್ತಪ್ಪಿಸಿ ಸಾಂತ್ವನ ಕೇಂದ್ರದಿಂದ ಪರಾರಿ ಆಗಿದ್ದಾರೆ.
ಸಾಂತ್ವನ ಕೇಂದ್ರದಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾಂಪೌಂಡ್ ಹತ್ತುವಾಗ ಓರ್ವ ಮಹಿಳೆ ಆಯತಪ್ಪಿ ಬಿದ್ದು ಕಾಲು ಮುರಿದುಕೊಂಡಿದ್ದಾಳೆ. ಈ ಸಂಬಂಧ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಸ್ಕೇಪ್ ಆಗಿರುವ ವಿದೇಶಿ ಮಹಿಳಾ ಪ್ರಜೆಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.










